ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಯುವ ಮುಖಂಡ ಜಿ.ಬಿ. ವಿನಯ್ ಕುಮಾರ್ ಸ್ಪರ್ಧಿಸುವುದು ಫಿಕ್ಸ್ ಆಗಿದ್ದು, ಈ ಬಗ್ಗೆ ಬೆಂಬಲಿಗರ ಸಭೆಯಲ್ಲಿ ನಿರ್ಧಾರ ಪ್ರಕಟಿಸಿದ್ದಾರೆ. ಈ ನಿರ್ಧಾರ ಕಾಂಗ್ರೆಸ್ ಗೆ ಟೆನ್ಷನ್ ಹೆಚ್ಚಿಸಿದ್ದು, ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್.ಎಸ್ . ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದು, ವಿನಯ್ ಕುಮಾರ್ ಸ್ಫರ್ಧೆಯಿಂದ ಕಾಂಗ್ರೆಸ್ ತೀವ್ರ ಹಿನ್ನೆಡೆಯಾಗಲಿದೆ. ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸತತ ಸೋಲಿನ ಬಳಿಕ ಈ ಬಾರಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಗೆಲ್ಲಲ್ಲೇಬೇಕೆಂಬ ಹಠಕ್ಕೆ ಬಿದ್ದಿದೆ. ಆದರೆ, ವಿನಯ್ ಕುಮಾರ್ ಸ್ಫರ್ಧೆಯಿಂದ ಕಾಂಗ್ರೆಸ್ ಮತ ವಿಭಜನೆಯ ಆತಂಕ ಕಾಡುತ್ತಿದೆ. ವೋಟ್ ವಿಭಜನೆಯಿಂದ ಬಿಜೆಪಿಗೆ ಲಾಭವಾದರೂ ಅಚ್ಚರಿ ಇಲ್ಲ.
ಬೆಂಗಳೂರಿನಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿ ಸ್ವಾಮೀಜಿ ಸಮ್ಮುಖ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಎಸ್.ಎಸ್.ಮಲ್ಲಿಕಾರ್ಜುನ ಸಮಕ್ಷಮದಲ್ಲೇ ಮನವೊಲಿಸಿದ್ದರು. ಇನ್ನೂ ವಯಸ್ಸು, ಅವಕಾಶ ಇದೆ. ನಿನ್ನನ್ನು ಬೆಳೆಸುವ ಜವಾಬ್ಧಾರಿ ನಮ್ಮದು ಎಂದು ಸಿಎಂ ಭರವಸೆ ನೀಡಿದ್ದರು. ವಿನಯಕುಮಾರ ಎರಡು ದಿನ ಸಮಯ ಕೇಳಿದ್ದರು. ತಮ್ಮ ನಿವಾಸದ ಅಂಗಳದಲ್ಲಿ ಜಿ.ಬಿ.ವಿನಯಕುಮಾರ ಅವರು ತಮ್ಮ ಬೆಂಬಲಿಗರು, ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಪ್ರತಿಯೊಬ್ಬರ ಅಭಿಪ್ರಾಯ, ಸಲಹೆ ಕೇಳಿದ್ದೇನೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿದರು.
ದಾವಣಗೆರೆ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈಗ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದು, ಚುನಾವಣೆಯಲ್ಲಿ ಗೆದ್ದ ಹಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ ತೋರಿಸುತ್ತೇನೆ. ನಾಯಕರ ಮಾತಿಗಿಂತಲೂ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವೆ. ಜಿಲ್ಲೆಯ ರಾಜಕಾರಣ ಎರಡು ಪ್ರಬಲ ಕುಟುಂಬಗಳ ಕೈಯಲ್ಲಿ ಇದೆ. ಈ ಬಗ್ಗೆ ಜನರಲ್ಲೂ ಅಸಮಾಧಾನವಿದೆ. ಕ್ಷೇತ್ರದಲ್ಲಿ ಹೊಸಬರಿಗೆ, ಹೊಸ ಮುಖಗಳಿಗೆ, ಯುವಕರಿಗೆ ಅವಕಾಶ ಸಿಗಬೇಕೆಂಬುದಕ್ಕಾಗಿ ಹೋರಾಟ ನಡೆಸಿದ್ದೇನೆ. ನನಗೆ ಇಬ್ಬರೂ ಎದುರಾಳಿಗಳಾಗಿದ್ದಾರೆ ಎಂದು ತಿಳಿಸಿದರು.
ಸಚಿವ ಈಶ್ವರ ಖಂಡ್ರೆ ಮಗನಿಗೆ ಟಿಕೆಟ್ ನೀಡಲಾಗಿದೆ. ಅಂಥವರಿಗೆ ಇಲ್ಲದ ಮಾನದಂಡ ನನಗೇಕೆ? ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರು ನನಗೆ ಶಾಲು, ಹಾರ ಹಾಕಿರುವುದು ವಿಜಯಶಾಲಿಯಾಗಿ ಬಾ ಎಂಬುದಾಗಿ ಹೇಳಿದಂತೆ ಎಂದೇ ತಿಳಿದಿದ್ದೇನೆ. ನಿನ್ನೆ ಶ್ರೀಗಳು, ಸಿಎಂ ಜೊತೆ ಸಮಾಲೋಚನೆ ಆಗಿದೆಯೇ ಹೊರತು, ನಾನು ಯಾವುದೇ ತೀರ್ಮಾನವನ್ನೂ ಅಲ್ಲಿ ಹೇಳಿಲ್ಲ. ನಾನು ಇಂಥದ್ದೊಂದು ನಿರ್ಧಾರ ಕೈಗೊಳ್ಳುತ್ತಿರುವುದು ಪೊಲಿಟಿಕಲ್ ಸುಸೈಡ್ ಎನಿಸಬಹುದಾದರೂ, ಕುಟುಂಬ ವರ್ಗ ಹಾಗೂ ಕ್ಷೇತ್ರದ ಜನರ ಜೊತೆಗೆ ಚರ್ಚಿಸಿಯೇ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಿತ. ಒಮ್ಮೆ ನಾಮಪತ್ರ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಅವ್ಯಸ್ಥೆಯ ವಿರುದ್ಧ ಹೋರಾಟ ಇದಾಗಿದೆ. ಮುಂದಿನ ಪೀಳಿಗೆಗೆ ಹೊಸ ನಾಯಕತ್ವ ಸೃಷ್ಟಿಯಾಗುವ ನಿಟ್ಟಿನಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸಲು ಉದ್ದೇಶಿಸಿದ್ದೇನೆ ಎಂದರು.