ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ 9ನೇ ವಾರ್ಷಿಕ ಘಟಿಕೋತ್ಸವ ಮಾ. 24 ರ ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ವಹಿಸುವರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಸಮ-ಕುಲಾಧಿಪತಿ ಡಾ. ಸಿ.ಎನ್. ಅಶ್ವಥ್ ನಾರಾಯಣ ಉಪಸ್ಥಿತರಿರುವರು. ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಕುಲಾಧಿಪತಿ ಡಾ. ಪಿ. ವಿ. ಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಎಸ್.ವಿ. ಹಲಸೆ, ಕುಲಸಚಿವರು(ಆಡಳಿತ) ಪ್ರೊ. ಗಾಯತ್ರಿ ದೇವರಾಜ, ಕುಲಸಚಿವರು(ಪರೀಕ್ಷಾಂಗ) ಪ್ರೊ. ಅನಿತಾ ಹೆಚ್.ಎಸ್, ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಭಾಗವಹಿಸುವರು.



