ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಎಂಟನೇ ವಾರ್ಷಿಕ ಘಟಿಕೋತ್ಸವ ಏಪ್ರಿಲ್ 8 ರಂದು ಬೆಳಿಗ್ಗೆ 11 ಗಂಟೆಗೆ ಶಿವಗಂಗೋತ್ರಿ ಆವರಣದಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯಪಾಲರು, ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ವಜುಭಾಯಿ ರುಡಾಭಾಯಿ ವಾಲಾ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವಥನಾರಾಯಣ ಉಪಸ್ಥಿತರಿರುವರು. ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್‍ನ ಸಂಸ್ಥಾಪಕರು ಮತ್ತು ಅಧ್ಯಕ್ಷ ಡಾ.ಗುರುರಾಜ್ ಕರಜಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡುವರು.
ಕುಲಪತಿಗಳು, ಕುಲಸಚಿವರು(ಪರೀಕ್ಷಾಂಗ), ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಪಾಲ್ಗೊಳ್ಳುವರು ಎಂದು ದಾವಣಗೆರೆ ವಿವಿ ಕುಲಪತಿಗಳಾದ ಪ್ರೊ.ಎಸ್.ವಿ.ಹಲಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



