ಖಾಸಗೀಕರಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯ: ವಿಜಯ ಸಂಕೇಶ್ವರ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ದಾವಣಗೆರೆ: ದೇಶದ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಖಾಸಗೀಕರಣವೊಂದೇ ಸೂಕ್ತ ಹಾಗೂ ಪರಿಹಾರ ಮಾರ್ಗ ಎಂದು ಉದ್ಯಮಿ, ವಿಆರ್ ಎಲ್ ಸಮೂಹ ಸಂಸ್ಥೆ ಚೇರಮನ್ ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಾಧನೆ-ಪ್ರೇರಣೆ ಕುರಿತು ಸಾಧಕರೊಂದಿಗೆ ಮಾತುಕತೆ  ವಿಶೇಷ ಉಪನ್ಯಾಸದಲ್ಲಿ  ಮಾತನಾಡಿದರು. ಜಗತ್ತಿನ ಯಾವುದೇ ದೇಶದಲ್ಲಿಯೂ ಸರ್ಕಾರವೇ ಕಂಪನಿಗಳನ್ನು ತೆರೆದು ವಹಿವಾಟು ನಡೆಸುವ ಸಂಪ್ರದಾಯವಿಲ್ಲ. ಶಿಕ್ಷಣ, ಆರೋಗ್ಯ, ಮೂಲಸೌಲಭ್ಯ ಅಭಿವೃದ್ಧಿಗೆ ಮಾತ್ರ ಸರ್ಕಾರದ ಸೇವೆ ಸೀಮಿತವಾಗಿವೆ. ಇದರಿಂದ ಎಲ್ಲೆಡೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ಹೇಳಿದರು.

ಭಾರತದಲ್ಲಿ ರಾಜಕೀಯ ಮತ್ತು ಸ್ವಹಿತಾಸಕ್ತಿಗಾಗಿಯೇ ಸರ್ಕಾರ ಸಂಸ್ಥೆಗಳು ಆರಂಭಿಸಿದಂತಾಗಿದೆ. ಸರ್ಕಾರದ ಹೆಸರಿನಲ್ಲಿ ನಿಗಮ, ಮಂಡಳಿ, ಕಾರ್ಖಾನೆ ಆರಂಭವಾಗಿವೆ. ಕೆಲವರನ್ನು ರಾಜಕೀಯವಾಗಿ ತೃಪ್ತಿ ಪಡಿಸುವುದನ್ನು ಹೊರತುಪಡಿಸಿದರೆ ಅವುಗಳಿಂದ ಸಾರ್ವಜನಿಕರಿಗೆ ಎಷ್ಟು ಉಪಯೋಗವಾಗಿದೆ  ಎಂಬುದು ಅರ್ಥವಾಗುತ್ತಿಲ್ಲ. ಆದರೆ,  ರಾಜಕಾರಣಿಗಳು ಅವುಗಳ ಹೆಸರಿನಲ್ಲಿ ಲಾಭ ಪಡೆಯುತ್ತಿದ್ದಾರೆ. ಅಧಿಕಾರ ಅನುಭವಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ ಎಂದರು.

ಖಾಸಗಿ ಸಂಸ್ಥೆಗಳಲ್ಲಿ ಏನೇ ಲಾಭ ಗಳಿಸಿದರೂ ಅದಕ್ಕೊಂದು ದಾಖಲೆ ಇರುತ್ತದೆ. ರಾಜಕೀಯ ಹಿತಾಸಕ್ತಿಯಿಂದ ಮುಕ್ತವಾಗಿರುತ್ತದೆ. ಜನಸಾಮಾನ್ಯರನ್ನೂ ಭ್ರಷ್ಟರನ್ನಾಗಿಸುವ ವ್ಯವಸ್ಥೆ ಇರುವುದಿಲ್ಲ. ಆದರೆ ಸತ್ಯ ಶುದ್ಧ, ಕಾಯಕ ಪ್ರಜ್ಞೆ, ನಿಸ್ವಾರ್ಥ, ಪ್ರಾಮಾಣಿಕತನ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಜಾಗ್ರತಗೊಳ್ಳಬೇಕು. ಆಗಷ್ಟೇ ಸಮಾಜವನ್ನು ಸುಧಾರಿಸಲು, ಸದೃಢ ಭಾರತವನ್ನು ನಿರ್ಮಿಸಲು, ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ರಾಷ್ಟ್ರವೆಂದು ಗುರುತಿಸಲು ಸಾಧ್ಯ.ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರುಕೈಗೊಂಡ ನಿರ್ಧಾರ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.

ಯಾವುದೇ ವ್ಯಕ್ತಿಗೆ ಮಾರ್ಗದರ್ಶನ ನೀಡಿ ಸಾಧನೆಗೆ ಪ್ರೇರಣೆ ನೀಡಬಹುದು. ಆದರೆ ಅವರನ್ನು ಸಾಧಕರನ್ನಾಗಿ ಮಾಡಲು ಸಾಧ್ಯವಿಲ್ಲ. ಆತ್ಮವಿಶ್ವಾಸ, ದೃಢ ಸಂಕಲ್ಪ ಮತ್ತು ಶ್ರದ್ಧಾಪೂರ್ವಕ ಕಾಯಕಗಳಿಂದ ಮಾತ್ರ ಸಾಧನೆ ಸಾಧ್ಯ. ಇದು ಕಲ್ಲು ಮುಳ್ಳಿನ ಹಾದಿ. ಅದನ್ನು ದಾಟಿ ಮುನ್ನಡೆದಾಗ ಮಾತ್ರ ಯಶಸ್ಸಿನ ಹಾದಿ ಕಂಡುಕೊಳ್ಳಬಹುದು. ದಿನದ 24 ಗಂಟೆಯೂ ಜಾಗೃತವಾಗಿದ್ದು, ಕಾರ್ಯ ನಿರ್ವಹಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಡಾ.ಸಂಕೇಶ್ವರ ಸಲಹೆ ನೀಡಿದರು.

ಯಾರೂ ಯಾವುದೇ ಸಾಧಕರನ್ನು ಅನುಕರಣೆ ಮಾಡಬಾರದು. ಅವರ ಸಾಧನೆ ಪ್ರೇರಣೆಯಿಂದ ನಿಮ್ಮದೇ ಶೈಲಿಯಲ್ಲಿ, ನಿಮ್ಮದೇ ಯೋಜನೆ ಮತ್ತು ಯೋಚನೆಯಿಂದ ಕಾರ್ಯ ರೂಪಿಸಿಕೊಳ್ಳಿ. ನಷ್ಟ, ಸಮಸ್ಯೆ, ಸವಾಲುಗಳು ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯ. ಅವುಗಳನ್ನು ಮೆಟ್ಟಿ ಮುನ್ನಡೆಯುವ ವಿಭಿನ್ನ ದಾರಿ ಕಂಡುಕೊಳ್ಳಿ. ಸೋಲು, ಅವಮಾನ, ನಷ್ಟದ ಅನುಭವ ಉನ್ನತಿಗೆ ಹಾದಿ ತೋರುತ್ತದೆ’ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಎಲ್ಲ ನೆರವು ನೀಡಲು ವಿಆರ್‍ಎಲ್ ಸಂಸ್ಥೆ ಬದ್ಧವಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ವೃತ್ತಿಪರ ಕೌಶಲ್ಯ ಅಭಿವೃದ್ಧಿ, ಮಾರ್ಗದರ್ಶನ, ತರಬೇತಿ ನೀಡುವ ಕುರಿತು ಸಂಸ್ಥೆಯ ಆಡಳಿತ ಮಂಡಳಿ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಮುನ್ನುಗ್ಗುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆ, ಸಾಧನೆಗೆ ಬಡತನ ಅಥವಾ ಸಮಸ್ಯೆಗಳು ಅಡ್ಡಿಯಾಗುವುದಿಲ್ಲ. ಅದಕ್ಕೆ ಇಚ್ಛಾಶಕ್ತಿ ಅಗತ್ಯಎಂಬುದನ್ನುಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿದಾವಣಗೆರೆ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ‘ದಾವಿ ಸಮಾಚಾರ’ ಮತ್ತು ಯೂಟೂಬ್‍ಚಾನೆಲ್ ‘ದಾವಿ ಟಿವಿ’ಯನ್ನು ವಿಜಯ ಸಂಕೇಶ್ವರಅವರು ಉದ್ಘಾಟಿಸಿದರು.

ಸಿಂಡಿಕೇಟ್ ಸದಸ್ಯರಾದ ಮಲ್ಲಿಕಾರ್ಜುನ ಮಾಡಾಳು, ಡಾ.ಶ್ರೀಧರ, ಇನಾಯತ್‍ ಉಲ್ಲಾ ಟಿ, ವಿಜಯಲಕ್ಷ್ಮೀ ಹಿರೇಮಠ, ಪವನ್, ಆಶೀಶ್ ರೆಡ್ಡಿ, ಕರ್ನಾಟಕ ವೃತ್ತಿ ನಾಟಕಅಕಾಡೆಮಿಅಧ್ಯಕ್ಷಯಶವಂತ ಸರದೇಶಪಾಂಡೆ, ಲಲತಾ ವಿಜಯ ಸಂಕೇಶ್ವರ ಉಪಸ್ಥಿತರಿದ್ದರು.ಕುಲಸಚಿವೆ ಪ್ರೊ.ಗಾಯತ್ರಿದೇವರಾಜ ಸ್ವಾಗತಿಸಿದರು.ಪರೀಕ್ಷಾಂಗ ಕುಲಸಚಿವೆ ಪ್ರೊ.ಅನಿತಾಎಚ್.ಎಸ್ ವಂದಿಸಿದರು.ಡಾ. ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *