ದಾವಣಗೆರೆ: ವಿದ್ಯಾರ್ಥಿ ಜೀವನದ ಕನಸುಗಳನ್ನು ನನಸಾಗಿಸಲು ನಿರಂತರ ಪ್ರಯತ್ನ ಬಹಳ ಮುಖ್ಯವಾಗಿರುತ್ತದೆ. ಶಿಕ್ಷಣವು ವ್ಯಕ್ತಿಯ ಜೀವನದಲ್ಲಿ ಹೊಸ ಆಲೋಚನೆಗಳು, ಜ್ಞಾನ ಮತ್ತು ಸಾಧ್ಯತೆಗಳನ್ನು ತುಂಬುವ ನಿರಂತರ ಪ್ರಯಾಣವಾಗಿದೆ. ದಾವಣಗೆರೆ ವಿಶ್ವವಿದ್ಯಾನಿಲಯ 2009 ರಲ್ಲಿ ಸ್ಥಾಪನೆಯಾಗಿದ್ದರೂ ಪ್ರಗತಿಗೆ ಪೂರಕವಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ತೋಳಹುಣಸೆಯಲ್ಲಿನ ದಾವಣಗೆರೆ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ (Convocation) ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಕ್ಷಣವು ನಮಗೆ ಉದ್ಯೋಗದ ಜೊತೆಗೆ ನೈತಿಕತೆ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಒದಗಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಜ್ಞಾನ ಪಡೆದು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.
ಶ್ರೇಷ್ಠ ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕನಸು ಎಂದರೆ ಮಲಗಿರುವಾಗ ಕಾಣುವುದಲ್ಲ, ಅದು ಎಂದಿಗೂ ನನಸಾಗುವುದಿಲ್ಲ. ನಿದ್ರೆ ಮಾಡದೇ ಕಾಣುವ ಕನಸು ಗುರಿಮುಟ್ಟುವರೆಗೆ ಅದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ. ಅಂತಹ ಕನಸು ನಿಮ್ಮದಾಗಲಿ. ವಿದ್ಯಾವಂತ ಯುವಕರು ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲರು. ನೀವು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ನಿಮ್ಮ ಪ್ರಯತ್ನದಿಂದ ದೇಶವು ಪ್ರಗತಿ ಸಾಧಿಸುತ್ತದೆ ಎಂದು ಹೇಳಿದರು.
- 87 ಸ್ವರ್ಣ ಪದಕ, 57 ಅಭ್ಯರ್ಥಿಗಳಿಗೆ ಪಿಹೆಚ್‍ಡಿ ಪದವಿಪ್ರದಾನ
- ರಿಯಾಗೆಅತೀ ಹೆಚ್ವ 6 ಸ್ವರ್ಣ ಪದಕ
- ವಿಶ್ವವಿದ್ಯಾನಿಲಯಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು
- ವಿಶ್ವವಿದ್ಯಾನಿಲಯಗಳಲ್ಲಿ ಮಂಜೂರಾದ 2500 ಹುದ್ದೆಗಳು ಖಾಲಿ
ಪ್ರಸ್ತುತ ಜಗತ್ತು ವೇಗವಾಗಿ ಬದಲಾಗುತ್ತಿದೆ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ, ಸುಸ್ಥಿರ ಅಭಿವೃದ್ಧಿ ಮತ್ತು ಉದ್ಯಮಶೀಲತೆಯಂತಹ ಕ್ಷೇತ್ರಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತಿವೆ. ಇತ್ತೀಚಿನ ತಂತ್ರಜ್ಞಾನಗಳು ಮತ್ತು ಆಲೋಚನೆಗಳೊಂದಿಗೆ ನೀವು ಯಾವಾಗಲೂ ನಿಮ್ಮನ್ನು ನವೀಕೃತವಾಗಿರಿಸಿಕೊಳ್ಳಬೇಕು. ಸ್ವಾತಂತ್ರ್ಯದ ನಂತರ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ಈಗ ದೇಶದ ಆರ್ಥಿಕತೆಯು ಪ್ರಬಲವಾಗಿದ್ದು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದನ್ನು ಮತ್ತಷ್ಟು ಬಲಪಡಿಸಲು ಮತ್ತು ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮುಂಚೂಣಿಗೆ ತರಲು ನಿಮ್ಮ ಕೊಡುಗೆ ಬಹಳ ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದರಿಂದ ಇಂತಹ ಪರಿಸರ ಅಸಮತೋಲನದ ಗಂಭೀರ ಸಮಸ್ಯೆಯ ಬಗ್ಗೆ ಯೋಚಿಸಬೇಕು. ಇದಕ್ಕಾಗಿ ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಯ ನಿಟ್ಟಿನಲ್ಲಿ ಕೆಲಸ ಮಾಡುವ ಅವಶ್ಯಕತೆಯಿದೆ. ಶಿಕ್ಷಣದಿಂದ ಪಡೆದ ಜ್ಞಾನದೊಂದಿಗೆ, ಮುಂಬರುವ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿ ಏಕ್ ಭಾರತ್, ಶ್ರೇಷ್ಠ ಭಾರತ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾಲಯವು ಕಡಿಮೆ ಅವಧಿಯಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಹೆಸರು ಗಳಿಸಿದೆ. ನಿರಂತರ ಮತ್ತು ಸಕಾರಾತ್ಮಕ ಪೂರ್ವಭಾವಿ ಪ್ರಯತ್ನಗಳ ಮೂಲಕ ಅಭಿವೃದ್ಧಿ ಹೊಂದಿದ ಭಾರತಕ್ಕೆ ಮಾನವ ಸಂಪನ್ಮೂಲಗಳನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯವು ಪ್ರಮುಖ ಪಾತ್ರ ವಹಿಸುತ್ತಿದೆ. ಘಟಿಕೋತ್ಸವದಲ್ಲಿ ಕಾಗಿನೆಲೆ ಪೀಠದ ಗೌರವಾನ್ವಿತ ಶ್ರೀ ಜಗದ್ಗುರು ನಿರಂಜನಾನಂದ ಪುರಿ ಸ್ವಾಮೀಜಿ, ಸಮಾಜ, ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತಾಸಕ್ತಿಯಲ್ಲಿ ಕೆಲಸ ಮಾಡುತ್ತಿರುವ ಶ್ರೀ. ಎಸ್.ಎ.ರವೀಂದ್ರನಾಥ್, ಮತ್ತು ಪ್ರೊ.ಎಸ್.ಆರ್.ನಿರಂಜನ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಅವರಿಗೆ ಅಭಿನಂದಿಸಿ, ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತಾಸಕ್ತಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಪದವಿಯನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಮಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿರಬಹುದು, ಆದರೆ ನೀವು ಅವುಗಳನ್ನು ಜಯಿಸಿದ್ದೀರಿ. ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದಾಗಿರುವ ಈ ವಿಶೇಷ ದಿನವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಸಂಭ್ರಮಾಚರಣೆಯ ಜೊತೆಗೆ ನಿಮ್ಮ ಕನಸುಗಳ ಹಾರಾಟ ಆರಂಭವಾಗಿದೆ. ಈಗ ನೀವು ಶಿಕ್ಷಣದ ಹಾದಿಯಿಂದ ಅನುಭವ ಮತ್ತು ಕ್ರಿಯೆಯ ಹಾದಿಗೆ ಹೆಜ್ಜೆ ಹಾಕಲಿದ್ದೀರಿ, ನಿಮ್ಮ ಹಾದಿ ಸುಗಮವಾಗಿರಲಿ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ಹಾಗೂ ರ್ಯಾಂಕ್ ಪಡೆದವರನ್ನು ಕುರಿತು ರಾಜ್ಯಪಾಲರು ಹಾರೈಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ ವಿಶ್ವವಿದ್ಯಾನಿಲಯಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಸರ್ಕಾರ ತನ್ನ ಬದ್ದತೆಯನ್ನು ತೋರಿಸಿದೆ. ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ವರದಿ ನೀಡಲು ಸಂಪುಟ ಉಪ ಸಮಿತಿಗೆ ವಹಿಸಲಾಗಿದೆ. ವರದಿ ಬಂದ ನಂತರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
2500 ಹುದ್ದೆಗಳು ಖಾಲಿ: ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಮಂಜೂರಾದ 2500 ಹುದ್ದೆಗಳು ಖಾಲಿ ಇವೆ. ಮತ್ತು ಇಲ್ಲಿ ಹೊಸ ಕೋರ್ಸ್‍ಗಳನ್ನು ಆರಂಭಿಸಲಾಗಿದ್ದು ಈ ಹುದ್ದೆಗಳು ಸೇರಿದಂತೆ ಸುಮಾರು 3500 ರಷ್ಟು ಹುದ್ದೆಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹುದ್ದೆಗಳು ಖಾಲಿ ಇವೆ. ಸಂಪುಟ ಉಪ ಸಮಿತಿ ವರದಿ ನೀಡಿದ ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಗುಣಮಟ್ಟ ಆಧರಿಸಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕು. ಆದರೆ ಹೆಚ್ಚಿನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದರಿಂದ ಇದು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವು ನನ್ನದಾಗಿದೆ ಎಂದರು.
ತಾಂತ್ರಿಕತೆ ಬಹಳ ಬದಲಾವಣೆಯಾಗಿದ್ದು ಕೃತಕ ಬುದ್ದಿಮತ್ತೆ ಹಾಗೂ ಮಷಿನ್ ಲರ್ನಿಂಗ್, ಡಾಟಾ ಸೈನ್ಸ್ ಬಳಕೆ ಮಾಡಿಕೊಂಡು ಸ್ಪರ್ಧಾತ್ಮಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾಗಿದೆ ಎಂದರು.ಮುಖ್ಯ ಅತಿಥಿ ಪದ್ಮಭೂಷಣ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕರಾದ ಪ್ರೊ. ಪಿ.ಬಲರಾಮ್ ಘಟಿಕೋತ್ಸವ ಭಾಷಣ ಮಾಡಿದರು.
ರಿಯಾಗೆ 6 ಸ್ವರ್ಣ ಪದಕ: ಘಟಿಕೋತ್ಸವದಲ್ಲಿ 57 ಅಭ್ಯರ್ಥಿಗಳಿಗೆ ಪಿಹೆಚ್‍ಡಿ ಪದವಿ ಪ್ರದಾನ ಮಾಡಲಾಯಿತು. 2023-24 ನೇ ಸಾಲಿನಲ್ಲಿ ಸ್ನಾತಕ ಪದವಿ ಪಡೆದ 12129 ವಿದ್ಯಾರ್ಥಿಗಳಿಗೆ ಮತ್ತು ಎಂ.ಎ, ಎಂ.ಎಸ್.ಡಬ್ಲ್ಮೂ, ಎಂ.ಕಾಂ, ಎಂ.ಬಿ.ಎ, ಎಂ.ಎಸ್ಸಿ, ಎಂ.ಪಿ.ಇಡಿ, ಎಂ.ಇಡಿ ಸ್ನಾತಕೋತ್ತರ 1919 ವಿದ್ಯಾರ್ಥಿಗಳಿಗೆ ಪದವಿ ಪಡೆಯಲು ಅರ್ಹರಾಗಿರುವರು. 87 ಸ್ವರ್ಣ ಪದಕಗಳಿದ್ದು ಸ್ನಾತಕ ಪದವಿಯಲ್ಲಿ 14 ವಿದ್ಯಾರ್ಥಿಗಳು 24 ಸ್ವರ್ಣ ಪದಕ ಪಡೆದರು. ಸ್ನಾತಕೋತ್ತರ ಪದವಿಯಲ್ಲಿ 32 ವಿದ್ಯಾರ್ಥಿಗಳು 63 ಸ್ವರ್ಣ ಪದಕ ಪಡೆದರು. ಎಂ.ಕಾಂ ನಲ್ಲಿ ರಿಯಾ ಐ.ಕೆ.ಇವರು ಅತೀ ಹೆಚ್ಚು ಅಂದರೆ 6 ಸ್ವರ್ಣ ಪದಕ ಪಡೆದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.