Connect with us

Dvgsuddi Kannada | online news portal | Kannada news online

ದಾವಣಗೆರೆ: ಉದ್ಯೋಗ ಮೇಳದಲ್ಲಿ 2 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಭಾಗಿ

FB IMG 1640692536242

ದಾವಣಗೆರೆ

ದಾವಣಗೆರೆ: ಉದ್ಯೋಗ ಮೇಳದಲ್ಲಿ 2 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಭಾಗಿ

ದಾವಣಗೆರೆ: ಇಂದು ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ದಾವಣಗೆರೆ ಜಿಲ್ಲೆ ಮಾತ್ರವಲ್ಲದೆ, ಚಿತ್ರದುರ್ಗ, ಮಂಡ್ಯ, ಮೈಸೂರು, ಬೀದರ್, ಬಾಗಲಕೋಟೆ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 2 ಸಾವಿರಕ್ಕೂ ಹೆಚ್ಚಿನ ಉದ್ಯೋಗಾಕಾಂಕ್ಷಿಗಳ ಭಾಗವಹಿಸಿದ್ದರು.

75ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ವ್ಯಾಪ್ತಿಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ಸರ್ಕಾರ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ದಾವಣಗೆರೆ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ದಾವಣಗೆರೆ ವಿ.ವಿ. ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗಮೇಳ ಆಯೋಜಿಸಲಾಗಿತ್ತು.

ಸಮಾರಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪ್ರಸ್ತುತ ಕಾಲಮಾನದಲ್ಲಿ ಕೇವಲ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ ಮಾತ್ರಕ್ಕೆ ಯುವಜನತೆ ಉದ್ಯೋಗ ಪಡೆಯುವುದು ಕಷ್ಟಸಾಧ್ಯ. ಔದ್ಯೋಗಿಕ ಕ್ಷೇತ್ರಕ್ಕೆ ಬೇಕಿರುವ ಕೌಶಲ್ಯ, ವೃತ್ತಿ ನೈಪುಣ್ಯತೆ ಹೊಂದುವುದು ಅತಿ ಅವಶ್ಯವಾಗಿದೆ.ಉದ್ಯೋಗಂ ಪುರುಷ ಲಕ್ಷಣಂ ಎಂಬುದು, ಉದ್ಯೋಗಂ ಸ್ತ್ರೀ-ಪುರುಷ ಲಕ್ಷಣಂ ಎಂದು ಬದಲಾದ ಕಾಲವಿದು ಎಂದರು.

ಹಳ್ಳಿಗಳಿಗೆ ಭೇಟಿ ನೀಡುವ ಸಂದರ್ಭಗಳಲ್ಲಿ, ಅನೇಕರು ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದರೂ, ಉದ್ಯೋಗವಿಲ್ಲದೆ, ಕಟ್ಟೆಗಳ ಮೇಲೆ ಹರಟೆಹೊಡೆಯುತ್ತ ಕಾಲಹರಣ ಮಾಡುವುದನ್ನು ಕಾಣುತ್ತೇನೆ. ವಿಚಾರಿಸಿದಾಗ, ಉನ್ನತ ವ್ಯಾಸಂಗ ಮಾಡಿದ್ದರೂ, ನೌಕರಿ ಸಿಕ್ಕಿಲ್ಲ ಅಂತ ಹೇಳುವುದನ್ನು ಕೇಳಿದ್ದೇನೆ. ಎಲ್ಲರಿಗೂ ಸರ್ಕಾರಿ ನೌಕರಿ ದೊರೆಯುವುದು ಕಷ್ಟ. ಪ್ರತಿಯೊಂದು ಕೆಲಸವೂ ಮುಖ್ಯ. ಕೆಲಸ ದೊಡ್ಡದು, ಸಣ್ಣದು ಎನ್ನುವುದಲ್ಲ. ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದಾಗ ಯಶಸ್ಸು ಕಾಣಲು ಸಾಧ್ಯ. ಈಗಿನ ಔದ್ಯೋಗಿಕ ಕ್ಷೇತ್ರ ಬದಲಾಗಿದ್ದು, ಕೇವಲ ಪದವಿಗಳಿಂದ ಉದ್ಯೋಗ ದೊರಕುವುದು ಕಷ್ಟ. ಕೌಶಲ್ಯ, ವೃತ್ತಿಯಲ್ಲಿನ ನೈಪುಣ್ಯತೆ, ಉತ್ತಮ ವ್ಯಕ್ತಿತ್ವ ಪಡೆದವರಿಗೆ ಉದ್ಯೋಗಗಳು ಹೇರಳವಾಗಿದೆ. ಉದ್ಯೋಗಕ್ಷೇತ್ರ, ಕೈಗಾರಿಕೆಗಳು, ಮಾರುಕಟ್ಟೆ ಕ್ಷೇತ್ರಕ್ಕೆ ಬೇಕಿರುವಂತಹ ಅಭ್ಯರ್ಥಿಗಳನ್ನು ವಿಶ್ವವಿದ್ಯಾಲಯಗಳು, ಕಾಲೇಜುಗಳು ಸಿದ್ಧಪಡಿಸಬೇಕಿದೆ. ಆದರೆ ದುರದೃಷ್ಟವಶಾತ್ ಇದು ಆಗುತ್ತಿಲ್ಲ. ಕಾಲಮಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ನೈಪುಣ್ಯತೆ, ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ಅಪ್‍ಡೇಟ್ ಆಗಬೇಕು.

ದಿನೇ ದಿನೇ ಜ್ಞಾನ, ಕೌಶಲ್ಯ ಹೆಚ್ಚಾಗಬೇಕು. ಅಂದಾಗ ಮಾತ್ರ ಉದ್ಯೋಗ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಇಂದಿನ ಯುವಜನತೆ ಬಹಳಷ್ಟು ಬುದ್ದಿವಂತಿಕೆ ಹೊಂದಿದ್ದು, ನಮ್ಮ ದೇಶದ ಅರ್ಥ ವ್ಯವಸ್ಥೆಯನ್ನು ಉತ್ತುಂಗಕ್ಕೆ ತರುವಂತಹ ಸಾಮಥ್ರ್ಯ ಅವರಿಗಿದೆ. ಇಂತಹ ಯುವಜನತೆ ಭವಿಷ್ಯದಲ್ಲಿ ತಮ್ಮ ಕುಟುಂಬದ ಹಾಗೂ ದೇಶದ ಆಧಾರಸ್ತಂಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶವೂ ಕೂಡ ಯುವಜನರೇ ಹೆಚ್ಚಿರುವ ಮಾನವ ಸಂಪನ್ಮೂಲದ ಸದ್ಬಳಕೆ ಮಾಡಿಕೊಳ್ಳಲು ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಜಿ.ಪಂ. ಸಿಇಒ ಡಾ. ವಿಜಯಮಹಾಂತೇಶ್ ದಾನಮ್ಮನವರ್ ಮಾತನಾಡಿ, ಭಾರತ ಎರಡನೆ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, ದೇಶದ ಜಿಡಿಪಿ ಸೂಚ್ಯಂಕ ಜಗತ್ತಿನಲ್ಲೇ 5 ಸ್ಥಾನದಲ್ಲಿದ್ದರೂ, ಇಲ್ಲಿನ ಉದ್ಯೋಗ ಸೃಜನೆ ಹಾಗೂ ನಿರುದ್ಯೋಗ ಪ್ರಮಾಣ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವಾಗಿದೆ. ದೇಶದಲ್ಲಿ ಶೇ. 50 ಕ್ಕಿಂತ ಹೆಚ್ಚಿನ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಕೃಷಿ ವರ್ಷವೆಲ್ಲಾ ಉದ್ಯೋಗ ಕೊಡುವ ಕ್ಷೇತ್ರವಲ್ಲ. ಕೃಷಿಯ ಜೊತೆಗೆ ಇತರೆ ಕ್ಷೇತ್ರದಲ್ಲಿಯೂ ಉದ್ಯೋಗ ಕೈಗೊಳ್ಳುವುದು ಕುಟುಂಬ ಆರ್ಥಿಕ ಸಬಲತೆ ಕಾಯ್ದುಕೊಳ್ಳಲು ಅತಿ ಅವಶ್ಯಕ. ದೇಶದಲ್ಲಿ ಯುವಜನತೆ ಪ್ರಮಾಣ ಹೆಚ್ಚಿದೆ. ಅಲ್ಲದೆ ಇಲ್ಲಿ ಉತ್ಪಾದಕತೆ, ಯುವ ಮಾನವ ಸಂಪನ್ಮೂಲ ಮತ್ತು ಖರೀದಿ ಸಾಮಥ್ರ್ಯ ಅಧಿಕವಾಗಿರುವುದನ್ನು ಗಮನಿಸಿಯೇ, ವಿದೇಶಗಳ ಹಲವು ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರುತ್ತವೆ. ಹೀಗಾಗಿ ನಮ್ಮಲ್ಲಿನ ಯುವಜನತೆಯಲ್ಲಿ ವೃತ್ತಿ ನೈಪುಣ್ಯತೆ, ತಂತ್ರಜ್ಞಾನ, ಕೌಶಲ್ಯ ಹೆಚ್ಚಾಗಬೇಕು. ಇದನ್ನು ಮನಗಂಡಿರುವ ಸರ್ಕಾರ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆ ಜಾರಿಗೊಳಿಸಿ, ಗ್ರಾಮೀಣ ಯುವಜನತೆಗೆ ಕೌಶಲ್ಯ ತರಬೇತಿ ಕೊಟ್ಟು, ಅವರಿಗೆ ಉದ್ಯೋಗ ದೊರಕಿಸಿಕೊಡವಂತಹ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಜಿಲ್ಲೆಯಲ್ಲಿ ಈಗಾಗಲೆ ಜಗಳೂರು ಮತ್ತು ಹರಿಹರದಲ್ಲಿ ಉದ್ಯೋಗ ಮೇಳ ಆಯೋಜಿಸಿ, ಸುಮಾರು 1500 ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಲಾಗಿದೆ. ಇದೀಗ ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಉದ್ಯೋಗ ಮೇಳದಲ್ಲಿ ಸುಮಾರು 30 ಕಂಪನಿಗಳು ಉದ್ಯೋಗ, ತರಬೇತಿಗೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಮೇಳ ಆಯೋಜಿಸುವ ಉದ್ದೇಶವಿದೆ ಎಂದರು.

ದಾವಣಗೆರೆ ವಿವಿ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ್ ಮಾತನಾಡಿ, ಮನೆಯಲ್ಲಿ ದುಡಿಯುವ ಕೈಗಳು ಹೆಚ್ಚಾದರೆ ಕುಟುಂಬದ ಆರ್ಥಿಕ ಸ್ಥಿತಿ ಸದೃಢವಾಗಲು ಸಾಧ್ಯ. ಅದೇ ರೀತಿ ದೇಶದಲ್ಲಿಯೂ ಕೂಡ ದುಡಿಯುವ ವರ್ಗ ಹೆಚ್ಚಾದರೆ ಮಾತ್ರ ಆರ್ಥಿಕ ಅಭಿವೃದ್ಧಿ ಕಾಣಬಹುದು. ಯುವಜನತೆ ದೇಶದ ಆಸ್ತಿಯಾಗಿದ್ದು, ಅವರಿಗೆ ವೃತ್ತಿ ಕೌಶಲ್ಯದ ತರಬೇತಿ ನೀಡಿ, ಉದ್ಯೋಗಕ್ಕೆ ಅಣಿಯಾಗುವಂತೆ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದರಿಂದ ಭವಿಷ್ಯದಲ್ಲಿ ಯುವಜನಾಂಗ ಹೆಚ್ಚು ಹೆಚ್ಚು ಉದ್ಯೋಗ ಪಡೆಯಲು ಸಾಧ್ಯವಾಗಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ, ಯುವಜನರು ಮಹತ್ವಾಕಾಂಕ್ಷಿ ಕನಸು ಕಾಣಬೇಕು. ಜೊತೆಗೆ ಕನಸು ನನಸಾಗಿಸುವ ಗುರಿ ಹಾಕಿಕೊಂಡು ಪರಿಶ್ರಮ ಪಡಬೇಕು. ಯುವಜನ ಕೇವಲ ಉದ್ಯೋಗ ಪಡೆಯುವುದು ಮಾತ್ರವಲ್ಲ, ನೂರಾರು ಜನರಿಗೆ ಉದ್ಯೋಗ ನೀಡುವಂತಹ ಸಾಮಥ್ರ್ಯ ಸಾಧಿಸಬೇಕು. ಸರ್ಕಾರ ವತಿಯಿಂದ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಉದ್ಯೋಗಮೇಳಗಳನ್ನು ಆಯೋಜಿಸಬೇಕು ಎಂದರು.

ಸಮಾರಂಭದಲ್ಲಿ ದಾವಣಗೆರೆ ವಿವಿ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ್, ಜಿ.ಪಂ. ಯೋಜನಾ ನಿರ್ದೇಶಕ ಎಸ್. ಜಗದೀಶ್, ದಿಶಾ ಸಮಿತಿಯ ಸದಸ್ಯರುಗಳಾದ ಮುಪ್ಪಣ್ಣ ಮತ್ತು ಚೇತನ ಶಿವಕುಮಾರ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಖಾಸಗಿ ಕಂಪನಿಯೊಂದು ಇಬ್ಬರು ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದು, ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಡಿಸಿ, ಸಿಇಒ ಸೇರಿದಂತೆ ಗಣ್ಯರು ನೇಮಕಾತಿ ಪತ್ರವನ್ನು ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ನೀಡಿದರು.

ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಉದ್ಯೋಗ ಹಾಗೂ ತರಬೇತಿ ನೀಡುವ ಸಲುವಾಗಿ ಸುಮಾರು 30 ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. ದಾವಣಗೆರೆ ಜಿಲ್ಲೆ ಮಾತ್ರವಲ್ಲದೆ, ಚಿತ್ರದುರ್ಗ, ಮಂಡ್ಯ, ಮೈಸೂರು, ಬೀದರ್, ಬಾಗಲಕೋಟೆ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 2 ಸಾವಿರಕ್ಕೂ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಆಗಮಿಸಿ, ಉದ್ಯೋಗಮೇಳದಲ್ಲಿ ಭಾಗವಹಿಸಿದ್ದರು. ಅದರಲ್ಲೂ ಮಹಿಳಾ ಅಭ್ಯರ್ಥಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ದಾವಣಗೆರೆ ವಿ.ವಿ. ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ವಿವಿಧ ಕಂಪನಿಗಳಿಗೆ ಪ್ರತ್ಯೇಕವಾಗಿ ಕೊಠಡಿಗಳನ್ನು ನಿಗದಿಪಡಿಸಿ, ಅಭ್ಯರ್ಥಿಗಳಿಗೆ ಸಂದರ್ಶನ, ದಾಖಲೆಗಳ ಪರಿಶೀಲನೆಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿಕೊಡಲಾಗಿತ್ತು. ಉದ್ಯೋಗಮೇಳದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ನೊಂದಣಿ ಮಾಡಿಕೊಳ್ಳಲು ಅಲ್ಲದೆ, ನೇರವಾಗಿ ಮೇಳದಲ್ಲಿಯೂ ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top