ದಾವಣಗೆರೆ: ತುಂಗಾ ಮತ್ತು ಭದ್ರಾ ಜಲಾಶಯಗಳು ತುಂಬಿದ್ದು, ಎರಡು ಜಲಾಶಯಗಳಿಂದ ನದಿಗೆ ನೀರು ಹೊರ ಬಿಡಲಾಗಿದೆ. ಇದರಿಂದ ತುಂಗಭದ್ರಾ ನದಿಯಲ್ಲಿ ಸುಮಾರು 1.4 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರಯತ್ತುದೆ. ಜಿಲ್ಲೆಯ ಹೊನ್ನಾಳಿ, ಹರಿಹರ ಮೂಲಕ ಹಾಯ್ದು ಹೋಗುವ ತಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೊನ್ನಾಳಿಯ ಎರಡು ಜನ ವಸತಿ ಪ್ರದೇಶಗಳಿಗೆ ನದಿ ನೀರು ನುಗ್ಗಿದೆ.
ರಾಘವೇಂದ್ರಸ್ವಾಮಿ ಮಠ ಸಮೀಪದ ವಿಶ್ವೇಶ್ವರ ಶಾಲೆ, ಬಾಲರಾಜ್ ಘಾಟ್‌ನ 20 ಮನೆ ಹಾಗೂ ಬಂಬೂಬಜಾರ್‌ನ 6 ಮನೆಗಳು ಜಲಾವೃತಗೊಂಡಿವೆ. ಜಿಲ್ಲಾಡಳಿದ ಈಗಾಗಲೇ ಮುನ್ನೆಚ್ಚರಿಕೆ ವಹಿಸಿ 20ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಿದೆ. 90 ಜನರಿಗೆ ಅಂಬೇಡ್ಕರ್ ಭವನದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಮುಳುಗಡೆಯಾದ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಪ್ರಸ್ತುತ ತುಂಗಭದ್ರಾ ನದಿಯಲ್ಲಿ 1.4 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಭದ್ರಾ ಡ್ಯಾಂ ನ ಕ್ರಸ್ಟ್ ಗೇಟ್ ಮೂಲಕ ಇಂದು 39, 362 ಕ್ಯೂಸೆಕ್ ನೀರು ನದಿಗೆ ಹೊರ ಬಿಡಲಾಗಿದೆ. ಸಂಜೆ ವೇಳೆಗೆ ನದಿ ನೀರಿನ ಮಟ್ಟ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.