Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಕೇಂದ್ರಕ್ಕೆ ರೂ.100 ಕೋಟಿ ಪ್ರಸ್ತಾವನೆ ಸಲ್ಲಿಕೆ: ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ

ದಾವಣಗೆರೆ

ದಾವಣಗೆರೆ: ಜಿಲ್ಲೆಯ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಕೇಂದ್ರಕ್ಕೆ ರೂ.100 ಕೋಟಿ ಪ್ರಸ್ತಾವನೆ ಸಲ್ಲಿಕೆ: ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ

ದಾವಣಗೆರೆ:  ಜಿಲ್ಲೆಯ  ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಅಭಿವೃದ್ಧಿಗಾಗಿ ರೂ.100 ಕೋಟಿಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಸೋಮವಾರ ನೀರ್ಥಡಿ ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.

ಹಲವಾರು ಐತಿಹಾಸಿಕ ಸ್ಥಳಗಳಲ್ಲಿ ನೀರ್ಥಡಿ ರಂಗನಾಥಸ್ವಾಮಿ ದೇವಸ್ಥಾನವು ಪುರಾತನ ಸಾಂಸ್ಕೃತಿಕ ವೈಭವ ಹೊಂದಿರುವ ದೇವಾಲಯವಾಗಿದ್ದು, ಮಹರ್ಷಿಗಳು ತಪಸ್ಸು ಮಾಡುವಾಗ ಬಂದಂತಹ ನೀರನ್ನು ತಡೆದು ನಿಲ್ಲಿಸಿದ್ದರಿಂದ ನೀರ್ಥಡಿ ಎಂಬ ಹೆಸರು ಬಂದಿದೆ ಎಂದು ಇತಿಹಾಸ ಹೇಳುತ್ತದೆ. ಇಂತಹ ಐತಿಹಾಸಿಕ, ಸಾಂಸ್ಕೃತಿಕ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ಪ್ರವಾಸಿ ತಾಣವನ್ನಾಗಿಸಿ ಮಾಡಲಾಗುವುದು ಎಂದರು.

ನೀರ್ಥಡಿಯ ಈ ದೇವಾಲಯವನ್ನು ಐತಿಹಾಸಿಕ ಸ್ಥಳವನ್ನಾಗಿ ಗುರುತಿಸಿ ಪ್ರವಾಸೋದ್ಯಮ ಸ್ಥಳಗಳ ಪಟ್ಟಿಗೆ ಸೇರಿಸಬೇಕು ಎಂದು ಗ್ರಾಮಸ್ಥರು ಮನವಿಸಲ್ಲಿಸಿದ್ದಾರೆ. ನಾನು ಕೂಡ ಪ್ರವಾಸೋದ್ಯಮ ಸಚಿವರೊಂದಿಗೆ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವುದರ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ನೂತನ ಮುಖ್ಯ ಮಂತ್ರಿಗಳು ಅಧಿಕಾರ ಸ್ವೀಕರಿಸಿದ ಅರ್ಧ ಗಂಟೆಯಲ್ಲಿಯೇ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ರೂ.30 ಲಕ್ಷ ಕುಟುಂಬಗಳಿಗೆ ಸ್ಕಾಲರ್‍ಶಿಪ್ ವ್ಯವಸ್ಥೆ ಮಾಡಿದ್ದು, ಹಾಗೂ ವೃದ್ದಾಪ್ಯ ವೇತನ, ವಿಧವಾ ವೇತನವನ್ನು ರೂ. 800 ರಿಂದ ರೂ 1000 ಕ್ಕೆ ಹೆಚ್ಚಳ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರೈತರ ಬೆಳೆಗಳಾದ ಹೂ-ಹಣ್ಣು, ತರಕಾರಿ ಬೆಳೆಗಳು ಹಾನಿಯಾದರೆ ಸರ್ಕಾರದಿಂದ ನಿಗದಿಪಡಿಸಲಾದ ರೂ. 25 ಸಾವಿರವನ್ನು ಬೆಳೆ ಪರಿಹಾರವಾಗಿ ನೀಡಲಾಗುತ್ತಿದೆ ಎಂದರು.

ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಜಿಲ್ಲೆಯ ಆನಗೋಡು ಗ್ರಾಮದ ನೀರ್ಥಡಿಯಲ್ಲಿರುವ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನವು ಪ್ರಾಚೀನ ಕಾಲದಿಂದಲೂ ಐತಿಹಾಸಿಕ ಸ್ಥಳವಾಗಿದ್ದು, ಚಿತ್ರದುರ್ಗದ ಪಾಳೆಗಾರರು ಈ ದೇವಸ್ಥಾನವನ್ನು ನಿರ್ಮಿಸಿದ್ದರು. ಕಾಲ ಕಳೆದಂತೆ ದೇವಸ್ಥಾನದ ಬಹು ಭಾಗಗಳು ಶಿಥಿಲಗೊಂಡಿದ್ದು, ಅದರ ಜೀರ್ಣೋದ್ಧಾರದ ಕಾರ್ಯವಾಗಬೇಕಾಗಿದೆ.

ದೇವಸ್ಥಾನವು ಪಾರಂಪರಿಕ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಪ್ರವಾಸೋದ್ಯಮ ಪ್ರದೇಶವಾಗಿ ಗುರುತಿಸಲು ಆಯ್ಕೆಯಾಗಿದ್ದು, ಜೀರ್ಣೋದ್ಧಾರಕ್ಕೆ ಈಗಾಗಲೇ ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವರಾದ ಆನಂದ್ ಸಿಂಗ್ ಇವರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಇದೊಂದು ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಾಡಾಗಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯನ್ನು ಇನ್ನೂ ಬಹಳಷ್ಟು ಜನರು ಮಾಡಿಸಿಕೊಂಡಿಲ್ಲ. ಕೇಂದ್ರÀ ಮತ್ತು ರಾಜ್ಯ ಸರ್ಕಾರ ನೀಡಿರುವ ಯೋಜನೆಗಳ ಸೌಲಭ್ಯಗಳನ್ನು ನಾಗರಿಕರು ಉತ್ತಮ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ 80 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ, ಬೇಳೆ ಹಾಗೂ ಇತರೆ ಧಾನ್ಯ ಪದಾರ್ಥಗಳನ್ನು ವಿತರಿಸಲಾಗಿದೆ. ಹಾಗೆಯೇ ದೇಶದಾದ್ಯಂತ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದರೂ ಕೂಡ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿಲ್ಲ. ಆದಷ್ಟು ಬೇಗ ಜನರು ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಹಾಗೂ ಪ್ರಧಾನ ಮಂತ್ರಿ ಅವರ ಈ ಅಭಿಯಾನ ಯಶಸ್ವಿಗೊಳ್ಳಲು ಸಹಕಾರ ನೀಡಬೇಕು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗೆ ಬೇಕಾದ ಪೂರಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ ಬಿ.ದಾನಮ್ಮನವರ್, ದಾವಣಗೆರೆ ಜಿಲ್ಲೆ ತಹಶೀಲ್ದಾರ್ ಬಿ.ಎನ್.ಗಿರೀಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಪಾಲಾಕ್ಷಿ, ಗ್ರಾಮ ಪಂ. ಸದಸ್ಯರಾದ ಆರ್.ರೂಪಾ, ವನಜಾಕ್ಷಮ್ಮ, ಚನ್ನಬಸಮ್ಮ, ಎನ್.ಜಿ.ನಾಗರಾಜ, ಕಮಲಮ್ಮ ಹಾಗೂ ಸವಿತಾ ಮಲ್ಲೇಶ್ ಸೇರಿದಂತೆ ಇನ್ನಿತರ ಗ್ರಾ.ಪಂ.ಸದಸ್ಯರು ಪಾಲ್ಗೊಂಡಿದ್ದರು.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});