ದಾವಣಗೆರೆ: ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪಶು ಪರೀಕ್ಷಕರಿಗೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ಜಾನುವಾರುಗಳ ರೋಗ ನಿಯಂತ್ರಣ’ ದ ಕುರಿತು ಒಂದು ದಿನದ ವಿಸ್ತರಣಾ ಕಾರ್ಯಕರ್ತರ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ 40 ಪಶು ಪರೀಕ್ಷಕರು ಉತ್ಸಾಹದಿಂದ ಭಾಗಿಯಾಗಿ ಜಾನುವಾರುಗಳ ವಿವಿಧ ರೋಗಗಳು ಮತ್ತು ಅವುಗಳ ನಿಯಂತ್ರಣ ಅದರಲ್ಲೂ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ದನಗಳಿಗೆ ಬಾಧಿಸುತ್ತಿರುವ ಚರ್ಮಗಂಟು ರೋಗದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಯಿತು.
ಜಿಲ್ಲೆಯಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪಶುಗಳ ಆರೋಗ್ಯ ಪಾಲನೆಯ ಕುರಿತು ಡಾ. ಜಿ.ಕೆ. ಜಯದೇವಪ್ಪ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ನಂತರ ಉಪನ್ಯಾಸ ನೀಡಿದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಡಾ. ಕೆ. ನಾಗರಾಜ್ , ರೋಗಗಳನ್ನು ಪತ್ತೆ ಹಚ್ಚುವುದು ಮತ್ತು ಇದಕ್ಕೆ ಬೇಕಾಗುವ ಮಾದರಿಗಳನ್ನು ಸಂಗ್ರಹಿಸುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ಉದ್ಘಾಟಿಸಿದರು. ದಾವಣಗೆರೆ ಜಿಲ್ಲೆಯ ಪಶು ಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಚಂದ್ರಶೇಖರ ಸಂಕದ್ ಮತ್ತು ಡಾ. ವಿರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಇಲಾಖೆಯ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.



