ದಾವಣಗೆರೆ: ಅಡಿಕೆಯಲ್ಲಿ ಅಂತರಬೆಳೆಯಾಗಿ ಸಾಂಬಾರು ಬೆಳೆಗಳನ್ನು ಬೆಳೆದರೆ ಆರ್ಥಿಕ ಸ್ವಾವಲಂಬನೆ ಸಾಧ್ಯವೆಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಯಾದ ಡಾ. ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಆತ್ಮ ಯೋಜನೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ, ಕೊಂಡುಕುರಿ ರೈತ ಉತ್ಪಾದಕ ಕಂಪನಿ ಇವರ ಸಂಯುಕ್ತಾಶ್ರಯಲ್ಲಿ ಪಲ್ಲಾಗಟ್ಟೆ ಗ್ರಾವದಲ್ಲಿ ಹಮ್ಮಿಕೊಂಡ ‘ಕಿಸಾನ್ ಗೋಷ್ಠಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯಾಗಿ ಅಡಿಕೆ ಬೆಳೆ ವಿಸ್ತೀರ್ಣ ಜಾಸ್ತಿಯಾಗುತ್ತಿದ್ದು, ರೈತರು ನೀರನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕೆಂದು ತಿಳಿಸಿದರು.
ಆಹಾರ ಬೆಳೆಗಳ ಉತ್ಪಾದನೆ ಕುಂಠಿತ
ಜಗಳೂರು ತಾಲ್ಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಗಳಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದ್ದು ಅಡಿಕೆ ಬೆಳೆ ವಿಸ್ತೀರ್ಣಕ್ಕೆ ಕಾರಣವಾಗಿದೆ. ಮುಂದೆ ಆಹಾರ ಬೆಳೆಗಳ ಉತ್ಪಾದನೆ ಕುಂಠಿತವಾಗುವ ಸಂಭವವಿದ್ದು ರೈತರು ಸಮಗ್ರ ಕೃಷಿಯ ಕಡೆಗೆ ಮಾರು ಹೋಗಬೇಕೆಂದು ತಿಳಿಸಿದರು.
ಜಗಳೂರು ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಭುಶಂಕರ್ ಮಾತನಾಡಿ, ಇಲಾಖೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಚಾಲ್ತಿಯಲ್ಲಿದ್ದು, ಹಣ್ಣಿನ ಬೆಳೆ, ತರಕಾರಿ ಬೆಳೆಗಳನ್ನು ಬೆಳೆಯಬಹುದೆಂದರು. ಹನಿ ನೀರಾವರಿಗೆ ಆರ್ಥಿಕ ಅನುದಾನವಿದ್ದು, ಇದರ ಸದುಪಯೋಗ ಪಡೆಯಬೇಕೆಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್ ಎಸ್. ಕೆ. ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಿಂದ ಆಹಾರ, ಕೃಷಿ ಮತ್ತು ಶಿಕ್ಷಣದ ಕುರಿತಾಗಿ ಈ ಭಾಗದಲ್ಲಿ ಉತ್ತಮ ಕಾರ್ಯಗಳಾಗುತ್ತಿದೆ ಹಾಗೂ ಇಂತಹ ತಾಂತ್ರಿಕ ಮಾಹಿತಿಯಿಂದ ಬೆಳೆಗಳಲ್ಲಿನ ಸಮಸ್ಯೆಗಳನ್ನು ನಿರ್ವಹಿಸಲು ಸಾಧ್ಯವಿದೆ
ಎಂದು ತಿಳಿಸಿದರು.
ಕೇಂದ್ರದ ವಿಜ್ಞಾನ ಡಾ. ಅವಿನಾಶ್ ಟಿ.ಜಿ. , ಅಡಿಕೆ ಬೆಳೆಯಲ್ಲಿ ಬರುವ ಪ್ರಮುಖ ರೋಗ ಮತ್ತು ಕೀಟಗಳ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ಆತ್ಮ ಯೋಜನೆಯ ಜಿಲ್ಲಾ ಉಪ ಯೋಜನೆಯ ಅಧಿಕಾರಿ ಶ್ರೀ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಪ್ರಗತಿಪರ ರೈತರಾದ ಶ್ರೀ ಕೆಂಚನಗೌಡರು ಕೃಷಿಯಲ್ಲಿನ ತಮ್ಮ ಅನುಭವ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಪನಿಯ ರೇವಣಸಿದ್ದಪ್ಪ ವಹಿಸಿಕೊಂಡಿದ್ದರು. ಟೆಕ್ ಸರ್ವ್ ಕಂಪನಿಯ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಪ್ರಗತಿಪರ ರೈತರಾದ ಪ್ರಕಾಶ್, ವಿಜಯಕುಮಾರ್, ರುದ್ರೇಶ್, ಅನಿಲ್ ಹಾಗೂ 150 ಕ್ಕೂ ಹೆಚ್ಚು ರೈತರು ಚರ್ಚೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದರು.



