ದಾವಣಗೆರೆ: ತೋಟಗಾರಿಕೆ ಬೆಳೆಗಳಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ವರ್ಷಕ್ಕೆರಡು ಬಾರಿ ಹಸಿರೆಲೆಗೊಬ್ಬರಗಳನ್ನು ಬಳಸುವುದು ಸೂಕ್ತ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಕಳೆನಾಶಕ ಬಳಕೆ ಕಡಿಮೆ ಮಾಡಿ
ಜಗಳೂರು ತಾಲ್ಲೂಕು ಬಸಪ್ಪನಹಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಹಮ್ಮಿಕೊಂಡ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿಗೆ ತೋಟಗಳಲ್ಲಿ ಕಳೆ ನಿರ್ವಹಣೆಗೋಸ್ಕರ ಕಳೆನಾಶಕದ ಬಳಕೆ ಹೆಚ್ಚಾಗುತ್ತಿದೆ. ಅತೀಯಾದ ಬಳಕೆಯಿಂದ ಮಣ್ಣಿನ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕುಂಠಿತವಾಗುತ್ತಿದ್ದು, ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ ಎಂದರು.
ಸೆಣಬು, ಡಯಾಂಚ, ವೆಲ್‌ವೆಟ್ ಬೀನ್ಸ್ ಬೆಳೆಯಿರಿ
ಭೂಮಿ ಫಲವತ್ತತೆ ನಿರ್ವಹಣೆಗೆ ಪ್ರತೀ ವರ್ಷ ಮುಂಗಾರಿನಲ್ಲಿ ಸೆಣಬು, ಡಯಾಂಚ, ವೆಲ್‌ವೆಟ್ ಬೀನ್ಸ್, ಅವರೆ-ತೊಗರಿ ಮುಂತಾದ ಹಸಿರೆಲೆಗೊಬ್ಬರಗಳನ್ನು ಬೆಳೆದು ಭೂಮಿಗೆ ಮುಗುಚುವುದರಿಂದ ಫಲವತ್ತತೆ ಹೆಚ್ಚಿಸಲು ಸಹಾಯವಾಗುತ್ತಿದೆ ಎಂದು ತಿಳಿಸಿದರು.
ಬೆಳೆ ಪರಿವರ್ತನೆಯತ್ತ ಗಮನಹರಿಸಿ
ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ.ಓ. ಮಾತನಾಡಿ, ಮೆಕ್ಕೆಜೋಳದಲ್ಲಿ ಮುಳ್ಳುಸಜ್ಜೆ ನಿವಾರಣೆಗೆ ರೈತರು ಬೆಳೆ ಪರಿವರ್ತನೆಯತ್ತ ಗಮನಹರಿಸಬೇಕೆಂದರು. ಭೇಟಿಯ ಸಂದರ್ಭದಲ್ಲಿ ರೈತರಾದ ಶಶಿಕುಮಾರ್, ಬಡಯ್ಯ, ಗಂಗಾಧರ, ಓಬಯ್ಯ ಇತರಿದ್ದರು.



