ದಾವಣಗೆರೆ: ನಗರದ ಶ್ರೀ ರಾಮನಗರದಲ್ಲಿರುವ ರಾಜ್ಯ ಮಹಿಳಾ ನಿಲಯ ಇಂದು ತಳಿರು ತೋರಣಗಳಿಂದ ಅಲಂಕಾರಗೊಂಡಿತ್ತು. ದೈನಂದಿನ ಕಚೇರಿ ಕೆಲಸದಲ್ಲಿ ನಿರತರಾಗುತ್ತಿದ್ದ ಮಹಿಳಾ ನಿಲಯದ ಅಧಿಕಾರಿಗಳು, ಸಿಬ್ಬಂದಿಗಳು ಇಂದು ಬಣ್ಣಬಣ್ಣದ ಸೀರೆಯಿಂ ಕಂಗೊಳಿಸುತ್ತಿದ್ದರು. ಇದಕ್ಕೆ ಕಾರಣವಾಗಿದ್ದು, ಮಹಿಳಾ ವಸತಿ ನಿಲಯದ ಮಗಳು ಸೌಮ್ಯ.ಕೆ.ಎಂ ಅವರ ವಿವಾಹ ಮಹೋತ್ಸವ…!
ಮಹಿಳಾ ನಿಲಯದ ನಿವಾಸಿ ಸೌಮ್ಯ.ಕೆ.ಎಂ ಅವರ ಪೋಷಕರ ಸ್ಥಾನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಿಇಒ ವಿಜಯಮಹಾಂತೇಶ ಬಿ. ದಾನಮ್ಮನವರ್, ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ರಾಜ್ಯ ಬಾಲ ಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜಪ್ಪ ಅವರುಗಳು ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲ್ಲೂಕಿನ ಕಡೆಗೋಡಿ ಗ್ರಾಮದ ಸುಬ್ರಾಯ ಮಂಜುನಾಥ ಭಟ್ಟ ಅವರಿಗೆ ಧಾರೆ ಎರೆದುಕೊಟ್ಟರು.
ವಧು ವರರು ಮದುವೆಯ ಉಡುಗೆ ತೊಟ್ಟು ತಯಾರಾದ ಬಳಿಕ ನಿಲಯದ ಕೊಠಡಿಯಲ್ಲಿ ಗಣಪತಿ ದೇವರಿಗೆ ಕೈಮುಗಿದರು. ಅಲ್ಲಿಂದ ವೇದಿಕೆಗೆ ಡಿಸಿ, ಸಿಇಒ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲ ಮಹಿಳೆಯರ ಜತೆಗೆ ವಧು-ವರರನ್ನು ಮಂಟಪಕ್ಕೆ ಕರೆತಂದರು.
ಬೆಳಗ್ಗೆ 11 ರಿಂದ 11.45 ರವರೆಗಿನ ಶುಭ ಮುಹೂರ್ತದಲ್ಲಿ ವರನಿಂದ ವಧುವಿಗೆ ಮಾಂಗಲ್ಯಧಾರಣೆ ಇತರೆ ಶಾಸ್ತ್ರಗಳು ನೆರವೇರಿದವು. ಪರಸ್ಪರ ಹಾರ ಬದಲಾಯಿಸಿಕೊಂಡಾಗ ನೆರೆದಿದ್ದ ಎಲ್ಲರೂ ಅಕ್ಷತೆ ಹಾಕಿ ಹರಿಸಿದರು. ಅನಾಥೆಯಾದ ಸೌಮ್ಯ ಗೆ ಸಂಬಂಧಿಕರು ಇಲ್ಲದ ಪರಿಣಾಮ ವಸತಿ ನಿಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಪೋಷಕರು ಹಾಗೂ ಸಂಬಂಧಿಕರ ಸ್ಥಾನದಲ್ಲಿ ನಿಂತು ಮದುವೆ ನೆರವೇರಿಸಿಕೊಟ್ಟರು.
ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲ್ಲೂಕಿನ ಕಡೆಕೋಡಿ ಗ್ರಾಮದ ಮಂಜುನಾಥ ಭಟ್ಟ ಹಾಗೂ ಕಮಲಮ್ಮ ಅವರ ಜೇಷ್ಠ ಪುತ್ರನಾದ ಸುಬ್ರಾಯ ಮಂಜುನಾಥ ಭಟ್ಟ ಈ ಯುವತಿಯನ್ನು ಮದುವೆಯಾಗಲು ಮುಂದೆ ಬಂದಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದರು. ಸುಬ್ರಾಯ ಮಂಜುನಾಥ ಭಟ್ಟ ಖಾಸಾಗಿ ಸಂಸ್ಥೆಯೊಂದರಲ್ಲಿ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಜಗಳೂರು ತಾಲ್ಲೂಕಿನ ಗೊಲ್ಲರಹಟ್ಟಿಯಲ್ಲಿ ಅತ್ಯಾಚಾರ ಸಂತ್ರಸ್ಥೆ ಮೂಕ ಯುವತಿಗೆ ಜನಿಸಿ, ಬಹಿಷ್ಕಾರಕ್ಕೆ ಒಳಗಾಗಿದ್ದ ಮಗುವಿಗೆ ಮಹಿಳಾ ನಿಲಯದಲ್ಲಿ ಶ್ರೀ ಕೃಷ್ಣ ಎಂದು ನಾಮಕಾರಣ ಮಾಡಲಾಗಿತ್ತು. ಇದೀಗ ಈ ಮಗುವಿಗೆ 2.5 ವರ್ಷ ತುಂಬಿದ್ದರಿಂದ ಡಿಸಿ ಹಾಗೂ ಸಿಇಒ ನೇತೃತ್ವದಲ್ಲಿ ಜವಳ ಶಾಸ್ತ್ರ ನೆರವೇರಿಸಲಾಯಿತು.
ನೂತನ ದಂಪತಿಗಳು ವಿವಾಹ ಜೀವನಕ್ಕೆ ಕಾಲಿರಿಸಿದ ಸಂಭ್ರಮಕ್ಕೆ ಸಾಕ್ಷಿಯಾದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕನ್ಯಾದಾನ ಮಾಡಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿ, ನಾನು ಅಧಿಕಾರಕ್ಕೆ ಬಂದ ಮೇಲೆ ಇದು 6ನೇ ವಿವಾಹ ಮಹೋತ್ಸವ. ಮಹಿಳಾ ನಿಲಯದಲ್ಲಿ 40ನೇ ಮದುವೆ ಇದು. ಹುಡುಗನ ಮನೆ ಕಡೆಯವರು ಸಂಸ್ಕಾರವಂತರು. ಹುಡುಗ ಖಾಸಾಗಿ ಸಂಸ್ಥೆಯೊಂದರಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಹುಡುಗಿ ಪಿಯುಸಿ ಓದು ಮುಗಿಸಿ ಮಹಿಳಾ ನಿಲಯದಲ್ಲಿ ಇದ್ದಾಳೆ. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನವ ಜೋಡಿ ಅನ್ಯೂನ್ಯವಾಗಿ ಪರಸ್ಪರ ಶಾಂತಿ, ಸಂತೋಷದಿಂದ ಬಾಳಲಿ ಎಂದು ಅಕ್ಷತೆಯನ್ನು ಹಾಕಿ ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ನಾವು ಭಾರತೀಯರು ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತೇವೆ. ಅದರಲ್ಲಿಯೂ ಅನಾಥಾಶ್ರಮದ ಮಗುವೊಂದಕ್ಕೆ ಅದ್ದೂರಿಯಾಗಿ ವಿವಾಹ ಮಾಡುತ್ತಿರುವುದು ಶ್ಲಾಘನೀಯ. ತಂದೆ ತಾಯಿ ಕಳೆದುಕೊಂಡಿರುವ ಈ ಮಕ್ಕಳು ಜಾತಿ ಬಂಧನದಿಂದ ಹೊರಗಿದ್ದಾರೆ. ಉಳಿದವರು ಜಾತಿ ಸಂಕುಚಿತ ಸಂಕೋಲೆಯಲ್ಲಿರಬೇಕಾಗುತ್ತದೆ. ಅನಾಥ ಮಕ್ಕಳನ್ನು ಮದುವೆಯಾಗಲು ಮುಂದೆ ಬಂದಿರುವವರಿಂದಲೇ ದೇಶ ಕಟ್ಟಲು ಸಾಧ್ಯ. ಇವರಿಂದಲೇ ಇಂದು ಮಾನವೀಯ ಮೌಲ್ಯಗಳು ಉಳಿಯುತ್ತಿವೆ. ಇಂತಹ ಮಾನವೀಯ ಕಾರ್ಯದಲ್ಲಿ ನಾನು ಭಾಗವಹಿಸಿರುವುದು ಧನ್ಯ ಎಂದರು.
ಸಿಇಒ ವಿಜಯಮಹಾಂತೇಶ ಬಿ.ದಾನಮ್ಮನವರ್ ಮಾತನಾಡಿ, ಮಧ್ಯಮ ವರ್ಗದ ಜನರು ಸಹ ಈ ರೀತಿಯಾಗಿ ಮದುವೆ ಮಹೋತ್ಸವವನ್ನು ಮಾಡುವುದಿಲ್ಲ. ಮಹಿಳಾ ನಿಲಯದ ಸಹಯೋಗದೊಂದಿಗೆ ಸರ್ಕಾರವು ಅನಾಥ ಹೆಣ್ಣು ಮಕ್ಕಳಿಗೆ ವಿಜೃಂಭಣೆಯಿಂದ ಮದುವೆ ಮಾಡಿಕೊಡುವುದು ಅಭಿನಂದನಾರ್ಹ. ಇಂತಹ ಸತ್ಕಾರ್ಯ ನಡೆಸುವ ಅವಕಾಶ ಸಿಕ್ಕಿರುವುದು ನಮಗೆ ಗೌರವ, ಹೆಮ್ಮೆ, ಹಾಗೂ ಸೌಭಾಗ್ಯವಾಗಿದೆ ಎಂದು ಹೇಳಿದರು. ದಂಪತಿಗಳು ಸುಖದಿಂದ ಬಾಳಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ರಾಜ್ಯ ಮಹಿಳಾ ನಿಲಯದ ಅಧೀಕ್ಷಕರಾದ ನಾಗರತ್ನಮ್ಮ, ರಾಜ್ಯ ಮಹಿಳಾ ನಿಲಯದ ಲೆಕ್ಕಿಗರಾದ ಸುಜಾತಮ್ಮ, ಬಾಲಕಿಯರ ಬಾಲ ಭವನದ ಅಧಿಕ್ಷಕರಾದ ಶೋಭಾ, ಕೌಟುಂಬಿಕ ಸುರಕ್ಷಿತಾಧಿಕಾರಿ ಸುಶೀಲಮ್ಮ, ಜಿಲ್ಲಾ ನಿರೂಪಣಾಧಿಕಾರಿ ಗಿರಿಜಮ್ಮ ಸೇರಿದಂತೆ ಜಿಲ್ಲೆಯ ಎಲ್ಲಾ ಸಿಡಿಪಿಒ ಗಳು ಇದ್ದರು.