ದಾವಣಗೆರೆ: ದಾವಣಗೆರೆಯಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ವಿಶೇಷ ರೈಲು ಸಂಚಾರ ಆರಂಭಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರಿಗೆ ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ್ ಮನವಿ ಸಲ್ಲಿಸಿದರು.
ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾದ ನಂತರ ಪ್ರತಿದಿನ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ದಾವಣಗೆರೆ ಮಾರ್ಗವಾಗಿ ವಿಶೇಷ ರೈಲು ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಿಂದ ಈಗಾಗಲೇ ಘೋಷಣೆ ಮಾಡಿರುವ ವಿಶೇಷ ರೈಲುಗಳು ಬೆಳಗಾವಿ, ಹುಬ್ಬಳ್ಳಿ, ಹೊಸಪೇಟೆ ಮಾರ್ಗ ಹಾಗೂ ಬೆಂಗಳೂರು, ಮೈಸೂರು ಕಡೆಯಿಂದ ಹೊರಡುವ ರೈಲುಗಳು ಚಿತ್ರದುರ್ಗ-ರಾಯದುರ್ಗ ಮುಖಾಂತರ ಹೊಸಪೇಟೆ ತಲುಪಿ, ಅಲ್ಲಿಂದ ಉತ್ತರ ಪ್ರದೇಶದ ಅಯೋಧ್ಯೆ ಕಡೆ ಪ್ರಯಾಣ ಬೆಳೆಸಲಿದೆ. ಮಧ್ಯ ಕರ್ನಾಟಕದ ಜಿಲ್ಲೆಗಳ ಜನರಿಗೂ ಅನುಕೂಲವಾಗುವಂತೆ ದಾವಣಗೆರೆ ಮೂಲಕ ವಿಶೇಷ ರೈಲುಗಳು ಇಲ್ಲದಿರುವುದರಿಂದ ಈ ಭಾಗದ ಭಕ್ತರಿಗೂ ಸಾಕಷ್ಟು ಅನಾನುಕೂಲವಾಗಿದೆ ಎಂದರು.
ಬೆಂಗಳೂರು ಅಥವಾ ಮೈಸೂರು ಕಡೆಯಿಂದ ಹೊರಡುವ ವಿಶೇಷ ರೈಲುಗಳು ಅರಸೀಕೆರೆ-ಚಿಕ್ಕಜಾಜೂರು-ದಾವಣಗೆರೆ-ಹರಪನಹಳ್ಳಿ-ಕೊಟ್ಟೂರು ಮಾರ್ಗವಾಗಿ ಹೊಸಪೇಟೆ ತಲುಪಿ, ಅಯೋಧ್ಯೆ ಕಡೆಗೆ ಪ್ರಯಾಣ ಬೆಳೆಸುವಂತೆ ವ್ಯವಸ್ಥೆ ಮಾಡಬೇಕು. ಈ ಮೂಲಕ ದಾವಣಗೆರೆ ಸೇರಿ ಮಧ್ಯ ಕರ್ನಾಟಕದ ಜಿಲ್ಲೆಗಳ ಭಕ್ತರಿಗೆ ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಳ ಅಯೋಧ್ಯೆ ದರ್ಶನಕ್ಕೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.



