ದಾವಣಗೆರೆ: ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಅವರ 55 ನೇ ಬರ್ತ್ ಡೇ ಹಿನ್ನೆಲೆ ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳು ಆಯೋಜಿಸಿದ್ದ ರಕ್ತದಾನ ಅಭಿಯಾನಕ್ಕೆ ಎಸ್ ಎಸ್ ಹೆಲ್ತ್ ಕೇರ್ ಟ್ರಸ್ಟ್ ಅಧ್ಯಕ್ಷೆ ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿನ ಐಎಂಎ ಹಾಲ್ ನಲ್ಲಿ ರಕ್ತದಾನ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಅವರ ಹುಟ್ಟುಹಬ್ಬಕ್ಕೆ ರಕ್ತದಾನ ಮಾಡೋಣ ಎಂಬ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಡದಿಂದ ರಕ್ತದಾನ ಕ್ಯಾಂಪ್ ಗಳನ್ನು ಜಿಲ್ಲೆಯಾದ್ಯಂತ ನಡೆಸಲು ತೀರ್ಮಾನಿಸಲಾಗಿದೆ. ಒಂದು ತಿಂಗಳಿಗೆ ಕೇವಲ 1 ಸಾವಿರ ಯೂನಿಟ್ ಮಾತ್ರ ಸಂಗ್ರಹಿಸಿಡಬಹುದು. ಈ ಕಾರಣಕ್ಕೆ ಡಿಸೆಂಬರ್ 31ರವರೆಗೆ ಈ ಅಭಿಯಾನ ನಡೆಯಲಿದೆ ಎಂದರು.
ಸಂಕಷ್ಟದಲ್ಲಿರುವವರಿಗೆ ರಕ್ತವನ್ನು ಉಚಿತವಾಗಿ ನೀಡಲಾಗುತ್ತದೆ. ಇದಕ್ಕಾಗಿ ಬಾಪೂಜಿ ಹಾಗೂ ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಯಾವ ಹೊತ್ತಿಗೆ ಕೇಳಿದರೂ ರಕ್ತ ಸಿಗುವಂಥ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಹಾಯವಾಣಿ ತೆರೆಯಲಾಗಿದೆ. ಹರಪನಹಳ್ಳಿ ಸೇರಿದಂತೆ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿಯೂ ಆಯೋಜಿಸಲಾಗುತ್ತಿದೆ. ಸೆ. 14ರಂದು ಮಾಯಕೊಂಡ ಹಾಗೂ 19ರಂದು ಹರಿಹರದಲ್ಲಿಯೂ ರಕ್ತದಾನ ಶಿಬಿರ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ನೀಡುವ ಮೂಲಕ ಎಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸೋಣ ಎಂದು ಕರೆ ನೀಡಿದರು.
ರಾಜಕಾರಣಕ್ಕೆ ಬರೋಲ್ಲ: ಸದ್ಯಕ್ಕೆ ನಾನು ರಾಜಕಾರಣಕ್ಕೆ ಬರಲ್ಲ. ಎಸ್. ಎಸ್. ಮಲ್ಲಿಕಾರ್ಜುನ್ ರ ಮೇಲೆ ಜನರು ಇಟ್ಟಿರುವ ಪ್ರೀತಿ, ವಿಶ್ವಾಸ ಅಪಾರ. ರಿಬ್ಬನ್ ಕಟ್, ಉದ್ಘಾಟನೆ ಮಾಡಿದರೆ ಅಭಿವೃದ್ಧಿ ಆಗಲ್ಲ. ಇದಕ್ಕೆ ದೂರದೃಷ್ಟಿ ಬೇಕು. ಇದು ಮಲ್ಲಿಕಾರ್ಜುನ್ ಅವರಲ್ಲಿದೆ. ದಾವಣಗೆರೆ ಸಿಂಗಾಪುರ್ ಆಗಬೇಕಾದರೆ ಮತ್ತೆ ಮಲ್ಲಿಕಾರ್ಜುನ್ ಅವರು ಗೆಲ್ಲಬೇಕು. ಆಗ ಮಾತ್ರ ಇದು ಸಾಧ್ಯವಾಗುತ್ತದೆ. ದಾವಣಗೆರೆಯ ಜನರು ಅವರ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಅಪಾರ. ಅಪ್ಪಾಜಿ ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಅವರು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇದು ಜನರ ಮನಸ್ಸಿನಲ್ಲಿ ಇದೆ ಎಂಬುದು ಈ ಕಾರ್ಯಕ್ರಮ ಆಯೋಜಿಸುತ್ತಿರುವುದನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿದರು.
ಯಾವಾಗಲೂ ಅಭಿವೃದ್ಧಿ ಕೆಲಸಗಳು ಮಾತನಾಡಬೇಕು. ಜನರ ಕೈಗೆ ಸಿಗುವುದಿಲ್ಲ ಎಂಬುದು ಮುಖ್ಯವಲ್ಲ. ಅಭಿವೃದ್ಧಿ ಯಾವ ರೀತಿಯಲ್ಲಿ ಆಗಿದೆ, ಆಗುತ್ತಿದೆ ಎಂಬುದು ಪ್ರಾಮುಖ್ಯತೆ ಪಡೆಯುತ್ತದೆ. ಶಾಸಕ, ಸಚಿವರಾಗಿದ್ದಾಗ
ಮಲ್ಲಿಕಾರ್ಜುನ್ ಅವರು ಮಾಡಿರುವ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದೆ. ಕ್ಷೇತ್ರದ ಎಲ್ಲರೂ ಮಾತನಾಡುತ್ತಾರೆ. ಯಾವಾಗಲೂ ಅಭಿವೃದ್ಧಿಪರ ಚಿಂತನೆ ಉಳ್ಳವರು ಆಯ್ಕೆಯಾಗಬೇಕು. ಇದು ಜನರಿಗೆ ಬಿಟ್ಟ ವಿಚಾರ. ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಋಣಿಯಾಗಿರುತ್ತೇವೆ ಎಂದು ತಿಳಿಸಿದರು.
ರಕ್ತದಾನ ಮಾಡಿದ ಬಳಿಕ ಮಾತನಾಡಿದ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ರಕ್ತದಾನ ಶಿಬಿರಕ್ಕೆ ಸಿಕ್ಕ ಸ್ಪಂದನೆ ಖುಷಿ ಕೊಟ್ಟಿದೆ. ಮತ್ತಷ್ಟು ಹೆಚ್ಚಿನ ಕೆಲಸ ಮಾಡಲು ನಮಗೆ ಹುಮ್ಮಸ್ಸು ತಂದಿದೆ. ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಆಯೋಜನೆ ಮಾಡಲಾಗಿರುವ ರಕ್ತದಾನ ಶಿಬಿರಕ್ಕೆ ಸಿಕ್ಕಿರುವುದು ಜನರ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಇನ್ನು ಮಲ್ಲಿಕಾರ್ಜುನ್ ರ ಪುತ್ರ ಸಮರ್ಥ್ ಶಾಮನೂರು ಹಾಗೂ ಪುತ್ರಿ ಶ್ರೇಷ್ಠ ಸಹ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಇದೇ ವೇಳೆ ರಕ್ತ ನೀಡಿದವರಿಗೆ ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರಮಾಣ ಪತ್ರ ವಿತರಿಸಿದರು. ರಕ್ತದಾನ ಮಾಡಿದವರು ಈ ಪತ್ರ ತೋರಿಸಿದರೆ ಉಚಿತವಾಗಿ ರಕ್ತ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಜಿಲ್ಲೆಯಾದ್ಯಂತ ಯಾವ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂಬ ಕುರಿತಂತೆ ಪ್ರಭಾ ಅವರು, ಪಾಲಿಕೆ ಸದಸ್ಯರು, ಕಾಂಗ್ರೆಸ್ ಮುಖಂಡರು, ಮಹಿಳಾ ಘಟಕದ ಸದಸ್ಯೆಯರ ಜೊತೆ ಸಮಾಲೋಚನೆ ನಡೆಸಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯ ಕೆ. ಚಮನ್ ಸಾಬ್, ಕಾಂಗ್ರೆಸ್ ಮುಖಂಡರಾದ ಕೆ. ಜಿ. ಶಿವಕುಮಾರ್, ಮಾಯಕೊಂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ್, ಮೊಹಮದ್ ಜಿಕ್ರಿಯಾ, ಅಬ್ದುಲ್ ಜಬ್ಬಾರ್, ಎಸ್. ಎಸ್. ಹೈಟೆಕ್ ಹಾಗೂ ಬಾಪೂಜಿ ಸಂಸ್ಥೆಯ ಪ್ರಸಾದ್, ವೈದ್ಯರು, ಸಿಬ್ಬಂದಿ, ಎಸ್ ಎಸ್ ಹೈಟೆಕ್ ಆಸ್ಪತ್ರೆಯ ಡಾ. ಪ್ರಸಾದ್, ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕುಮಾರ್, ಜೆಜೆಎಂ ಕಾಲೇಜಿನ ಪ್ರಾಂಶುಪಾಲರಾದ ಮುರುಗೇಶ್, ಶ್ರೀಕಾಂತ್ ಬಂಗೇರಾ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಕೆ. ಎಲ್. ಹರೀಶ್ ಬಸಾಪುರ ಮತ್ತಿತರರು ಹಾಜರಿದ್ದರು.