ದಾವಣಗೆರೆ: ಜೂನ್ 27ರಂದು ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ವತಿಯಿಂದ ನಗರದಲ್ಲಿ ದ್ವೀತಿಯ ವರ್ಷದ ಶ್ರೀ ಪುರಿ ಜಗನ್ನಾಥ ರಥಯಾತ್ರೆ ಮಾದರಿಯಲ್ಲಿ ಮಹಾ ಮಹೋತ್ಸವ ನಡೆಯಲಿದೆ ಎಂದು ದಾವಣಗೆರೆ ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರದಾಸ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಥಯಾತ್ರೆ ಜೂ.27 ರಂದು ಬೆಳಿಗ್ಗೆ 7ಕ್ಕೆ ಮಂಡೀಪೇಟೆಯ ಕೋದಂಡರಾಮ ದೇವಸ್ಥಾನದಲ್ಲಿ ನರಸಿಂಹ ಯಜ್ಞ ನಡೆಯಲಿದ್ದು, ಪೂರ್ಣಾಹುತಿ ನಂತರ ಮಹಾಮಂಗಳಾರತಿ ನಡೆಯಲಿದ್ದು, ನಂತರ ನಗರದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಸಂಚರಿಸಲಿದೆ. ರಥೋತ್ಸವವು ಮಂಡೀಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದಿಂದ ಆರಂಭಗೊಂಡು ಚಾಮರಾಜಪೇಟೆ, ಹಾಸಭಾವಿ ವೃತ್ತ, ಚೌಕಿಪೇಟೆ, ಹೊಂಡದ ವೃತ್ತ, ಅರುಣಾ ಚಿತ್ರಮಂದಿರ ವೃತ್ತ, ಆರ್.ಹೆಚ್.ಛತ್ರ, ಜಯದೇವ ವೃತ್ತ, ವಿದ್ಯಾರ್ಥಿ ಭವನದ ಮೂಲಕ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪಕ್ಕೆ ಅಂತ್ಯಗೊಳ್ಳಲಿದೆ. ಕಲ್ಯಾಣ ಮಂಟಪದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ರಥಯಾತ್ರೆ ಉತ್ಸವ ಸಮಿತಿಯ ಗೌರವಾಧ್ಯಕ್ಷ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಗೌರವ ಕಾರ್ಯದರ್ಶಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೇರಿದಂತೆ ಇತರೆ ಗಣ್ಯರು ಮಧ್ಯಾಹ್ನ 1.30ಕ್ಕೆ ನಡೆಯುವ ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಎಸ್.ಟಿ.ವೀರೇಶ್, ಕಾಸಲ್ ಬದರಿನಾಥ, ಪಂಢರಪುರದ ಲಕ್ಷ್ಮಿ ನಾರಾಯಣ ಭಟ್, ಸತ್ಯ ನಾರಾಯಣ ಇತರರಿದ್ದರು.



