ಡಿವಿಜಿ ಸುದ್ದಿ, ದಾವಣಗೆರೆ: ಗಾನಗಾರುಡಿಗ, ಸ್ವರಸಾರ್ವಭೌಮ, ಖ್ಯಾತ ಹಿನ್ನೆಲೆ ಗಾಯಕ ದೇಶಕಂಡ ಮಹಾನ್ ಸಂಗೀತ ಸಾಧಕ ಪದ್ಮಭೂಷಣ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ರೋಟರ್ಯಾಕ್ಟ್ ಸಂಸ್ಥೆ ಹಾಗೂ ಗೋ ಗ್ರೀನ್ ಸಂಸ್ಥೆ ವತಿಯಿಂದ ಗಾನ ನಮನ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಫೇಸ್‌ಬುಕ್ ಲೈವ್ ಮೂಲಕ ನಮನ ಸಲ್ಲಿಸಲಾಯಿತು. ದಾವಣಗೆರೆಯ ಉದಯೋನ್ಮುಖ ಗಾಯಕರಾದ ಶ್ರೀಧರ ಹಾಗೂ ಮಾನಸ ಅವರು ಎಸ್‌ಪಿಬಿ ಅವರ ಆಯ್ದ ಜನಪ್ರಿಯ ಹಾಡುಗಳನ್ನು ಸುಶ್ಯಾವ್ಯವಾಗಿ ಹಾಡಿ ಗೀತನಮನ ಸಲ್ಲಿಸಿದರು. ಅಮೆರಿಕದಲ್ಲಿ ನೆಲೆಸಿರುವ ನಮ್ಮ ದಾವಣಗೆರೆಯ ಹಿರಿಯ ಪತ್ರಕರ್ತ, ಲೇಖಕರು ಅನಿಲ್ ಭಾರದ್ವಾಜ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚೆಂದದ ನಾಲ್ಕು ಸಾಲುಗಳನ್ನು ರಚಿಸಿದ ಗೀತರಚನೆಕಾರರಿಗೂ ಹಾಗೂ ಅದಕ್ಕೆ ತಕ್ಕನಾಗಿ ಸಂಗೀತ ಸಂಯೋಜಿಸಿದ್ದ ಸಂಗೀತ ನಿರ್ದೇಶಕರಿಗೂ ಅವರು ಮಾಡಿದ ಕಾರ್ಯ ಸಾರ್ಥಕ ಎಂಬಂತೆ ಎಸ್‌ಪಿಬಿ ಆ ಹಾಡಿಗೆ ಜೀವ ತುಂಬುವ ಕೈಂಕರ್ಯ ನೆರವೇರಿಸುತ್ತಿದ್ದರು ಎಂದು ಸ್ಮರಿಸಿದರು.
ಎಂತಹ ಕ್ಲಿಷ್ಟಕರ ರಾಗಗಳಿದ್ದರೂ ನೀರು ಕುಡಿದಷ್ಟೇ ಸರಾಗವಾಗಿ ಹಾಡಿ ಅಚ್ಚರಿ ಮೂಡಿಸುತ್ತಿದ್ದ ಮೇರುಗಾಯಕ ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರು ಹಾಡಿದ ಸಹಸ್ರ ಸಹಸ್ರ ಹಾಡುಗಳ ಮೂಲಕ ಅವರು ನಮ್ಮೆಲ್ಲರ ಮನೆಗಳಲ್ಲಿ ಮನಗಳಲ್ಲಿ ನೆಲೆಸಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ನಾಗರಾಜ್ ಡಿ.ಎಂ, ಶ್ರೀಕಾಂತ್ ಬಗಾರೆ, ರೋಟರ್ಯಾಕ್ಟ್ ಸಂಸ್ಥೆಯ ಕಾರ್ಯದರ್ಶಿ ಚೇತನ್ ಕುಮಾರ್ ಉಪಸ್ಥಿತರಿದ್ದರು.



