ದಾವಣಗೆರೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ವಿರ್ ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರೈ. ಲಿ ಸಂಯುಕ್ತಾಶ್ರಯದಲ್ಲಿ ಭಾರತ್ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಜಗಳೂರು ತಾಲ್ಲೂಕಿನ ಮರಿಕುಂಟೆ ಗ್ರಾಮದಲ್ಲಿ ಕುರಿ-ಮೇಕೆಗಳಲ್ಲಿ ಸಂಪೂರ್ಣ ಜಂತುಹುಳು ನಿವಾರಣೆಯ ಪ್ರಚಾರಾಂದೋಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಡಿ ಮರಿಕುಂಟೆ ಹಾಗೂ ಸುತ್ತಮುತ್ತಲಿನ75 ಕುರಿಗಾಯಿಗಳ 2 ಸಾವಿರಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳಿಗೆ ವಿರ್ ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರೈ, ಲಿ ವತಿಯಿಂದ ಉಚಿತವಾಗಿ ಜಂತುಹುಳು ನಿವಾರಕ ಔಷಧಿಯನ್ನು ನೀಡಲಾಯಿತು. ವಿರ್‌ಬ್ಯಾಕ್ ಕಂಪನಿಯ ಏರಿಯಾ ಬ್ಯೂಸಿನೆಸ್ ಮ್ಯಾನೇಜರ್ ಬಿ. ಓಂಪ್ರಕಾಶ್ ಜಂತು ನಿವಾರಕ ಔಷಧಿಯ ಬಳಕೆ ಮತ್ತು ಅದರ ಉಪಯೋಗದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ನೆರೆದಿದ್ದ ಎಲ್ಲಾ 75 ಜನ ರೈತರುಗಳಿಗೆ ಜಂತು ನಿವಾರಕ ಔಷಧಿಯನ್ನು ವಿತರಿಸಿದರು.
ವಿರ್‌ಬ್ಯಾಂಕ ಕಂಪನಿಯ ಎನ್. ಎಸ್. ಸುರೇಶ್, ಕುರಿ ಮರಿಗಳ ಹಾಗೂ ಗರ್ಭಧರಿಸಿದ ಕುರಿಗಳ ರೋಗಗಳ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಪಶು ತಜ್ಞರಾದ ಡಾ. ಜಿ.ಕೆ. ಜಯದೇವಪ್ಪನವರು ಸಣ್ಣ ಮೆಲಕು ಹಾಕುವ ಪ್ರಾಣಿಗಳಿಗೆ ಸಮತೋಲನ ಆಹಾರ ಪೂರೈಕೆ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಕುರಿಗಳಿಗೆ ಜಂತುಹುಳು ಔಷಧಿಯನ್ನು ನೀಡುವುದರ ಮೂಲಕ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮರಿಕುಂಟೆ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ನಾಗರಾಜ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.



