ದಾವಣಗೆರೆ: ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯಕ್ಕಿದ್ದ ಶೇ. 4ರಷ್ಟು ಮೀಸಲಾತಿ ರದ್ದು ಮಾಡಿದ್ದು ದೊಡ್ಡ ತಪ್ಪು. ಅವರ ಮೀಸಲಾತಿ ಕಿತ್ತು ಬೇರೆಯವರಿಗೆ ಕೊಡುವುದು ಅವಶ್ಯಕತೆ ಇರಲಿಲ್ಲ ಎಂದು ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಬಂದಾಗ ಬಿಜೆಪಿ ಅವರು ಯಾರು ಏನೇ ಕೇಳಿದ್ರೂ ಕೊಟ್ಟು ಬಿಡುತ್ತಾರೆ. ಹೀಗೇ ಬಿಟ್ರೇ ಸರ್ಕಾರ ಕರ್ನಾಟಕವನ್ನೇ ಮಾರಿಬಿಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ 2 ಲಕ್ಷ ಜನ ಬಂದಿರಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹತ್ತು ಲಕ್ಷ ಜನರು ಬಂದಿದ್ದರು.ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಮನ್ನಣೆ ನೀಡುವುದು. ಕಾಂಗ್ರೆಸ್ 2 ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಇನ್ನು 25 ಮಂದಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ಮೊದಲ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದ 32 ಮಂದಿಗೆ ಟಿಕೆಟ್ ನೀಡಲಾಗಿದೆ. ಲಿಂಗಾಯತ ಸಮುದಾಯಕ್ಕೆ ಒಟ್ಟು 55ರಿಂದ 60 ಮಂದಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸ ಇದೆ.ದಾವಣಗೆರೆ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗ ಪ್ರಚಾರ ಆರಂಭಿಸಬೇಕಿಲ್ಲ, ಮೊದಲಿನಿಂದಲೂ ಪ್ರಚಾರ ನಡೆಸಲಾಗುತ್ತಿದೆ. ಮುಸ್ಲಿಮರಿಗೆ ಟಿಕೆಟ್ ನೀಡಿಕೆ ವಿಚಾರ ಮುಗಿದ ಅಧ್ಯಾಯ ಎಂದರು.