ದಾವಣಗೆರೆ: ಹಿರಿಯ ಶಾಸಕ, ಮಾಜಿ ಸಚಿವ ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ. ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ಇಂದು (ಡಿ.15) ಸಂಜೆ 4.30ಕ್ಕೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾಹಿತಿ ನೀಡಿದ್ದಾರೆ.
ಭಾನುವಾರ (ಡಿ. 14) ಸಂಜೆ 6:25ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.ಅವರ ಅಂತಿಮ ವಿಧಿವಿಧಾನಗಳನ್ನು ಸೋಮವಾರ (ಡಿ. 15) ಸಂಜೆ ದಾವಣಗೆರೆಯಲ್ಲಿ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ. ದಾವಣಗೆರೆಯ ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ದಶಕಗಳ ಕಾಲ ಸೇವೆ ಸಲ್ಲಿಸಿದ ಶಿವಶಂಕರಪ್ಪ ಅವರಿಗೆ ಗೌರವ ಸಲ್ಲಿಸಲು ಕುಟುಂಬ ಮತ್ತು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ
ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಅಂತ್ಯ ಸಂಸ್ಕಾರವನ್ನು ಇಂದು (ಸೋಮವಾರ) ಸಂಜೆ 4.30ರ ಹೊತ್ತಿಗೆ ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ. ಅವರ ಅಂತ್ಯಕ್ರಿಯೆಯನ್ನು ಪತ್ನಿ ಪಾರ್ವತಮ್ಮ ಅವರ ಸಮಾಧಿ ಪಕ್ಕದಲ್ಲೇ ನಡೆಸಲು ತಯಾರಿ ನಡೆದಿದೆ. ಗಣ್ಯರು ಮತ್ತು ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು ಬೆಂಗಳೂರು ಮತ್ತು ದಾವಣಗೆರೆ ಎರಡೂ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಪಾರ್ಥಿವ ಶರೀರವನ್ನು ಬೆಂಗಳೂರಿನ ಬಳ್ಳಾರಿ ರಸ್ತೆ, ಪ್ಯಾಲೇಸ್ ಗ್ರೌಂಡ್ ಎದುರಿನ ಅಖಿಲ ಭಾರತ ವೀರಶೈವ ಮಹಾಸಭಾದಮುಖ್ಯ ಕಚೇರಿಯಲ್ಲಿ ಇರಿಸಲಾಗಿದೆ. ಶಿವಶಂಕರಪ್ಪನವರು ಮಹಾಸಭಾದ ಅಧ್ಯಕ್ಷರಾಗಿದ್ದ ಕಾರಣ, ಮಹಾಸಭಾದಿಂದ ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸಲಾಗುತ್ತಿದೆ.
ರಾಜಕೀಯ ಗಣ್ಯರು, ಮಹಾಸಭಾ ಮುಖಂಡರು ಮತ್ತು ಸದಸ್ಯರ ಅಂತಿಮ ದರ್ಶನಕ್ಕೆ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಗೌರವ ಸಮರ್ಪಣೆಯ ನಂತರ, ಪಾರ್ಥಿವ ಶರೀರವನ್ನು ಬೆಳಗ್ಗೆಯೊಳಗೆ ವಿಶೇಷ ಆಂಬುಲೆನ್ಸ್ ಮೂಲಕ ದಾವಣಗೆರೆಗೆ ರವಾನೆ ಮಾಡಲಾಗುತ್ತದೆ ಎಂದು ಮಹಾಸಭಾ ಮೂಲಗಳು ತಿಳಿಸಿವೆ. ದಾವಣಗೆರೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಮೂರು ಹಂತಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯವರೆಗೆ: ಶಾಮನೂರು ಅವರ ಪುತ್ರ ಮತ್ತು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಕುಟುಂಬದವರು ಮತ್ತು ಆಪ್ತರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ: ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಸಾರ್ವಜನಿಕರು ಗೌರವ ಸಲ್ಲಿಸಲು ಅನುಕೂಲವಾಗುವಂತೆ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಸಂಜೆ 4 ಗಂಟೆ ನಂತರ: ಅಂತಿಮ ಯಾತ್ರೆ ಕಲ್ಲೇಶ್ವರ ರೈಸ್ ಮಿಲ್ ಕಡೆಗೆ ಸಾಗಲಿದ್ದು, ಸಂಜೆ 5 ಗಂಟೆಗೆ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ವಯೋ ಸಹಜ ಅನಾರೋಗ್ಯದ ಕಾರಣ ಕಳೆದ ಮೂರು ತಿಂಗಳಿಂದ ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಕ್ಟೋಬರ್ 23ರಿಂದ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತಿಂಗಳ ಹಿಂದೆ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡುಬಂದಿದ್ದರಿಂದ ಅವರನ್ನು ದಾವಣಗೆರೆಗೆ ಕರೆತರಲಾಗಿತ್ತು. ಆದರೆ, ನಗರಕ್ಕೆ ಬಂದ ಒಂದು ವಾರದ ಬಳಿಕ ಮತ್ತೆ ಆರೋಗ್ಯ ಸ್ಥಿತಿ ಏರುಪೇರಾದ ಕಾರಣ ಪುನಃ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ(ಡಿ.14) ಸಂಜೆ ಕೊನೆಯುಸಿರೆಳೆದರು.



