ದಾವಣಗೆರೆ: ಶುಕ್ರವಾರ ದಾವಣಗೆರೆ ಹೊರ ವಲಯದ ಶ್ರೀ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ನಡೆಯಲಿರುವ ಮಾಜಿ ಸಚಿವ, ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ದಿ.ಶಾಮನೂರು ಶಿವಶಂಕರಪ್ಪ ಶಿವಗಣಾರಾಧನೆ ಹಾಗೂ ನುಡಿ ನಮನ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ದಾವಣಗೆರೆ ಇತಿಹಾಸದಲ್ಲೇ ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ.
100 ಎಕರೆ ಪ್ರದೇಶದಲ್ಲಿ ಬೃಹತ್ ಮೂರು ವೇದಿಕೆ
100 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಈ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕಾಗಿ ಒಟ್ಟು ಮೂರು ಬೃಹತ್ ವೇದಿಕೆಗಳನ್ನು ನಿರ್ಮಿಸಲಾಗಿದೆ. ಒಂದು ಮುಖ್ಯ ವೇದಿಕೆಯಾಗಿದ್ದು, ಉಳಿದಂತೆ ಅಕ್ಕಪಕ್ಕದಲ್ಲಿ ಎರಡು ಉಪ ವೇದಿಕೆಗಳಿರಲಿವೆ. ವಿವಿಧ ಮಠಾಧೀಶರು, ಮಾಜಿ ಪ್ರಧಾನಿ, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಸಚಿವರು,ಮಾಜಿ ಸಚಿವರು, ಶಾಸಕರು ರಾಜಕೀಯ ನಾಯಕರು ಸೇರಿ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮುಖ್ಯ ವೇದಿಕೆಯಲ್ಲಿ ಸುಮಾರು 200 ಗಣ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಕಪಕ್ಕದ ವೇದಿಕೆಗಳಲ್ಲಿ ಗಣ್ಯರ ಕುಟುಂಬಸ್ಥರು ಹಾಗೂ ವಿವಿಧ ಶಾಖಾಮಠಗಳ ಹರ-ಗುರುಗಳಿಗೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
50 ಸಾವಿರ ಜನಕ್ಕೆ ಊಟದ ವ್ಯವಸ್ಥೆ
50 ಸಾವಿರ ಜನರಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇದೊಂದು ದೊಡ್ಡ ಮಟ್ಟದ ನುಡಿನಮನ ಕಾರ್ಯಕ್ರಮ ಇದಾಗಲಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಕಾರ್ಯಕ್ರಮದ ಕೊನೆಯ ಹಂತದ ಸಿದ್ಧತೆ ನಡೆಯುತ್ತಿದೆ.



