ದಾವಣಗೆರೆ: ಜಾತಿ ಗಣತಿ ಬಗ್ಗೆ ದಾವಣಗೆರೆಯಲ್ಲಿ ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು. ಇದರ ಜೊತೆ ವೀರಶೈವ ಲಿಂಗಾಯತರು ಸಮಾಜವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ಮಹಾಸಭಾ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.23 ಮತ್ತು 24 ರಂದು ದಾವಣಗೆರೆ ನಗರದ ಎಂಬಿಎ ಕಾಲೇಜು ಮೈದಾನದಲ್ಲಿ 24ನೇ ಅಖಿಲ ಭಾರತ ವೀರ ಶೈವ ಮಹಾ ಸಭೆಯ ಮಹಾ ಅಧಿವೇಶನ ನಡೆಯಲಿದೆ. ಕನಿಷ್ಟ 3 ರಿಂದ 4 ಲಕ್ಷ ಜನ ಸೇರುತ್ತಾರೆ. ವೀರಶೈವ ಪರಂಪರೆಯ ಎಲ್ಲ ಸ್ವಾಮೀಜಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಮಹಾ ಅಧಿವೇಶನದ ಬಗ್ಗೆ ಜನರಿಗೆ ಮಾಹಿತಿ ನೀಡಲು ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ ಎಂದು ಮಾಹಿತಿ ನೀಡಿದರು.
ಚಿತ್ರದುರ್ಗದ ಮುರಘಾಶ್ರೀ ಅವರು ಆರೋಪ ಮುಕ್ತರಾಗಿ ಹೊರಬರಲಿ. ಆಮೇಲೆ ವೀರಶೈವ ಮಹಾ ಅಧಿವೇಶಕ್ಕೆ ಕೆರಯುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದರು. ಕಳೆದ ವರ್ಷ ಕೊರೊನಾ ಹಾಗೂ ಚುನಾವಣೆ ಹಿನ್ನೆಲೆ ಅಖಿಲ ಭಾರತ ವೀರ ಶೈವ ಮಹಾ ಸಭೆಯ ಮಹಾ ಅಧಿವೇಶನವನ್ನು ಮುಂದೂಡಲಾಗಿತ್ತು. ಪ್ರತಿ 5 ವರ್ಷಕ್ಕೊಮ್ಮೆ ಮಹಾಸಭೆಯ ಮಹಾ ಅಧಿವೇಶನ ನಡೆಯುತ್ತದೆ ಎಂದರು.
ಜಾತಿ ಜನಗಣತಿ ವರದಿ ಬಿಡುಗಡೆ ಶಾಮನೂರು ಶಿವಶಂಕರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮನೆ ಮನೆಗಳಿಗೆ ಹೋಗಿ ಸಮೀಕ್ಷೆ ನಡೆಸಿಲ್ಲ. ಮನೆಯಲ್ಲೇ ಕುಳಿತು ವರದಿ ಸಿದ್ಧಪಡಿಸಲಾಗಿದೆ. ಜನಗಣತಿಯ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪದೋಷಗಳಿವೆ. ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿ ಗಣತಿ ಮಾಡಬೇಕು ಎಂದು ಆಗ್ರಹಿಸಿದ್ದರು.



