ದಾವಣಗೆರೆ: ದಾವಣಗೆರೆ ಉತ್ತರದಿಂದ ಎಸ್. ಎ. ರವೀಂದ್ರನಾಥ್ ಗೆಲ್ಲಿಸಿ ಎನ್ನುವ ಮೂಲಕ ಮತ್ತೊಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವನ್ನು ಸಿಎಂ ಬೊಮ್ಮಾಯಿ ನೀಡಿದರು. ಇದರೊಂದಿಗೆ ಶಾಸಕರ ವೀಂದ್ರನಾಥ್ ರಾಜಕೀಯ ನಿವೃತ್ತಿ ಎಂಬ ವದಂತಿಗೆ ತೆರೆ ಎಳೆದರು.
ನಗರದ ಹೊರ ವಲಯದ ಶಿರಮಗೊಂಡನಹಳ್ಳಿಯಲ್ಲಿ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನ ಉದ್ಘಾಟನೆ ಹಾಗೂ ಶಾಸಕ ಎಸ್ ರವೀಂದ್ರನಾಥ್ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಎಸ್ ಎ ರವೀಂದ್ರನಾಥ್ ಅವರ ರಾಜಕೀಯವನ್ನು ಹಲವು ವರ್ಷದಿಂದ ಹತ್ತರದಿಂದ ನೋಡಿದ್ದೇನೆ. ಅವರೊಬ್ಬ ಹುಟ್ಟು ರೈತ ಹೋರಾಟಗಾರ. ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಒಂದೇ ರೀತಿ ಇದ್ದವರು. ಅವರು ಯಾವತ್ತೂ ಅಧಿಕಾರಕ್ಕೆ ಆಸೆಪಟ್ಟಿಲ್ಲ ಎಂದರು.
ರವೀಂದ್ರನಾಥ್ ಕೇಳಿದ ಎಲ್ಲ ಕೆಲಸಗಳನ್ನು ನಾವು ಮಾಡಿಕೊಟ್ಟಿದ್ದೇವೆ. ನಿರಾಶ್ರಿತರಿಗೆ 100 ಎಕರೆಯಲ್ಲಿ ವಸತಿ ಸೌಲಭ್ಯ ಯೋಜನೆ ಹಾಕಿಕೊಂಡಿದ್ದಾರೆ.ಅದಕ್ಕೆ ಇನ್ನು 50 ಎಕರೆ ಹೆಚ್ಚು ಸ್ಥಳ ನೀಡಿ ಆ ಬಡಾವಣೆಗೆ ರವೀಂದ್ರನಾಥ್ ರವರ ಹೆಸರು ಇಡುತ್ತೇವೆ. ರವೀಂದ್ರನಾಥ್ರನ್ನು ಮತ್ತೆ ಶಾಸಕರನ್ನಾಗಿ ಮಾಡಿ, ಅವರಿಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜಕೀಯದಲ್ಲಿ ರವೀಂದ್ರನಾಥ್ ಮತ್ತು ಸಂಸದ ಜಿ ಎಂ ಸಿದ್ದೇಶ್ವರ ಅವರು ಎಲ್ಲರಿಗೂ ಮಾದರಿಯಾಗಬೇಕು. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರು ಸೇರಿರುವುದು ಜಂಟಿ ಅಧಿವೇಶನ ನಡೆಯುತ್ತಿದೆ ಎಂಬ ಭಾವನೆ ಮೂಡಿದೆ. ರವೀಂದ್ರನಾಥ್ ಗಟ್ಟಿ ಹೋರಾಟಗಾರ. ಅವರ ವ್ಯಕ್ತಿತ್ವದಿಂದ ಅವರು ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ. ನಿಜವಾದ ಮಣ್ಣಿನ ಮಗ ಅವರು, ಹಳ್ಳಿಯಲ್ಲೇ ಹುಟ್ಟಿ ಹಳ್ಳಿಯಲ್ಲೇ ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ ಎಂದರು.
ಶಾಮನೂರು ಶಿವಶಂಕರಪ್ಪ, ಜಿ. ಎಂ. ಸಿದ್ದೇಶ್ವರ್ ಹಾಗೂ ಎಸ್. ಎ. ರವೀಂದ್ರನಾಥ್ ಅವರ ಸಂಬಂಧ ಎಲ್ಲರಿಗೂ ಆದರ್ಶವಾಗಬೇಕು. ಶಾಮನೂರು, ಎಸ್ ಎ ರವೀಂದ್ರನಾಥ್ ನೂರು ವರ್ಷ ಬದುಕಲಿ ಎಂದು ಆಶೀರ್ವಾದ ಮಾಡಿದರು.