ದಾವಣಗೆರೆ
ದಾವಣಗೆರೆ: ಸಂಭ್ರಮದ 76ನೇ ಗಣರಾಜ್ಯೋತ್ಸವ; ಉಸ್ತುವಾರಿ ಸಚಿವರಿಂದ ಧ್ವಜಾರೋಹಣ; ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗೆ 19,66 ಕೋಟಿ ಅನುದಾನ
ದಾವಣಗೆರೆ: ಸಂವಿಧಾನವೇ ನಮ್ಮ ರಾಷ್ಟ್ರದ ಸರ್ವೋಚ್ಚ ಕಾನೂನು, ಅದಕ್ಕೆ ಎಲ್ಲರೂ ಗೌರವಿಸಬೇಕು ಮತ್ತು ಅದರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಪಥಸಂಚಲನದಲ್ಲಿ ವಿವಿಧ ತುಕುಡಿಗಳಿಂದ ಗೌರವ ವಂದನೆ ಸ್ವೀಕರಿಸಿ ತಮ್ಮ ಸಂದೇಶದಲ್ಲಿ ಮಾತನಾಡಿದರು.
ಬುದ್ಧ, ಬಸವ, ಅಂಬೇಡ್ಕರ್ ಅವರ ಸದಾಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯ ತುಂಬಿರುವುದರಿಂದ ರೈತಾಪಿ ವರ್ಗದಲ್ಲಿ ಹರ್ಷ ಮನೆಮಾಡಿದೆ. ರೈತರು ಬೇಸಿಗೆ ಬೆಳೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.
ಜನಸಾಮಾನ್ಯರ ಬದುಕಿಗೆ ಆರ್ಥಿಕ ಸಬಲತೆಯೊಂದಿಗೆ, ಸಾಮಾಜಿಕ ಗೌರವ ತಂದುಕೊಡುವ ದೃಷ್ಟಿಯಿಂದ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಹಲವಾರು ಜನಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾಗೊಳಿಸುತ್ತಿದೆ. ಇದರಿಂದ ರಾಜ್ಯದಲ್ಲಿನ ಜನರ ಜೀವನ ಮಟ್ಟ ಸುಧಾರಿಸಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ಉತ್ತೇಜಕವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ದೊರೆಕಿಸುವ ನಿಟ್ಟಿನಲ್ಲಿ ನುಡಿದಂತೆ ನಡೆದಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಜನಸಾಮಾನ್ಯರೆಲ್ಲರಿಗೂ ಮರಳು ಲಭ್ಯವಾಗುವಂತೆ ಮಾಡಲು ನದಿಪಾತ್ರದಲ್ಲಿ 24 ಮರಳಿನ ಬ್ಲಾಕ್‍ಗಳನ್ನು ಗುರುತಿಸಲಾಗಿದ್ದು ಇದರಲ್ಲಿ 4 ಬ್ಲಾಕ್ ಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಮರಳು ನೀಡಲು ಮೀಸಲಿರಿಸಿ 20 ಬ್ಲಾಕ್‍ಗಳಲ್ಲಿ ಜನರಿಗೆ ನಿಗಧಿತ ದರದಲ್ಲಿ ಮರಳು ಸಿಗುವಂತೆ ಮಾಡಲು ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ ಕೆಲವೇ ಕೆಲವೇ ದಿನಗಳಲ್ಲಿ ಪೂರ್ಣಗೊಂಡು ಜನರಿಗೆ ಮರಳು ಲಭ್ಯವಾಗಲಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೂ 5 ಗ್ಯಾರಂಟಿ ಯೋಜನೆಗಳಿಂದ ಒಟ್ಟು ರೂ. 1966 ಕೋಟಿ ಮೊತ್ತವನ್ನು ನೇರವಾಗಿ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ಅವರ ಖಾತೆಗೆ ವರ್ಗಾಯಿಸಲಾಗಿದೆ. ಶಕ್ತಿ ಯೋಜನೆಯಿಂದ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ದಾವಣಗೆರೆ ವಿಭಾಗದಿಂದ 6.78 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ಇದರ ಪ್ರಯಾಣದ ವೆಚ್ಚವಾಗಿ ರೂ. 190 ಕೋಟಿಗಳನ್ನು ನೀಡಿದೆ.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಮೂರು ಲಕ್ಷದ ಇಪ್ಪತ್ತೊಂಭತ್ತು ಸಾವಿರ ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಕೆ.ಜಿ. ಅಕ್ಕಿಯೊಂದಿಗೆ 5 ಕೆಜಿಗೆ ನಗದಾಗಿ ತಲಾ ರೂ. 170-ರಂತೆ ಒಟ್ಟು ರೂ. 287 ಕೋಟಿಗಳನ್ನು ಡಿ.ಬಿ.ಟಿ. ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3.61 ಲಕ್ಷ ಯಜಮಾನಿಯರಿಗೆ ರೂ. 1039 ಕೋಟಿ ವರ್ಗಾಯಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 4.37 ಲಕ್ಷ ಗ್ರಾಹಕರಿಗೆ 442 ಕೋಟಿ ವಿದ್ಯುತ್ ವೆಚ್ಚವಾಗಿ ಪಾವತಿಸಿದೆ. ಯುವನಿಧಿ ಯೋಜನೆಯಡಿ 5802 ಪದವೀಧರ ಹಾಗೂ ಡಿಪ್ಲೊಮಾ ಪಾಸಾದವರಿಗೆ ನಿರುದ್ಯೋಗ ಭತ್ಯೆಯಾಗಿ ರೂ. 8.47 ಕೋಟಿಗಳನ್ನು ಡಿ.ಬಿ.ಟಿ. ಮೂಲಕ ಪಾವತಿಸಲಾಗಿದೆ.
ಜಿಲ್ಲೆಗೆ ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 8,510 ಮನೆಗಳನ್ನು ಮಂಜೂರುಮಾಡಲಾಗಿದೆ. ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆಯಡಿ 2 ಅಕ್ಕಕೆಫೆ ಮಂಜೂರಾಗಿದ್ದು ಈಗಾಗಲೇ ದಾವಣಗೆರೆ ನಗರದಲ್ಲಿ ಆರಂಭಿಸಲಾಗಿದೆ. ಮಹಿಳಾ ಸ್ವ ಸಹಾಯ ಸಂಘದವರೇ ಇದರ ನಿರ್ವಹಣೆ ಮಾಡುವರು.
ದಾವಣಗೆರೆ ಮಹಾನಗರಪಾಲಿಕೆಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಮಂಜೂರಾದ ರೂ. 200 ಕೋಟಿ ಅನುದಾನಕ್ಕೆ ರೂಪಿಸಲಾದ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಟೆಂಡರ್ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿವೆ.
ದಾವಣಗೆರೆ ಜಿಲ್ಲೆ ತೋಟಗಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಜಿಲ್ಲೆಯ ರೈತರ ಬದುಕನ್ನು ಇನ್ನಷ್ಟು ಹಸನಗೊಳಿಸಲು ಕೆರೆ ತುಂಬಿಸುವ ಯೋಜನೆ, ನಾಲೆಗಳ ದುರಸ್ಥಿ ಕೈಗೊಳ್ಳುವ ಮೂಲಕ ಕೊನೆ ಭಾಗದ ರೈತರಿಗೂ ನೀರು ಸಿಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಆಕರ್ಷಕ ಪಥ ಸಂಚಲನ: 29 ತಂಡಗಳು ತಮ್ಮ ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು, ಪೊಲೀಸ್ ಅಧಿಕಾರಿ ಸೋಮಶೇಖರಪ್ಪ.ಹೆಚ್.ಬಿ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ಮಹೇಶ್ ಪಾಟೀಲ್ ಆರ್.ಎಸ್.ಐ. ನೇತೃತ್ವದ ಡಿಎಆರ್ ತಂಡ, ನಾಗರಿಕ ಪೊಲೀಸ್ ತಂಡ ಇಮ್ತಿಯಾಜ್, ಗೃಹರಕ್ಷಕ ದಳದಿಂದ ಯಲ್ಲಪ್ಪ, ಅಗ್ನಿಶಾಮಕ ದಳ ಪ್ರೇಮಾನಂದ್, ಎನ್.ಸಿ.ಸಿ ಡಿ.ಆರ್.ಎಂ. ವಿಜ್ಞಾನ ಕಾಲೇಜು ಶರ್ನಿಲ್.ಡಿ.ಕೆ., ಎನ್.ಸಿ.ಸಿ ಎಆರ್‍ಜಿ ಕಾಲೇಜಿನ ಚಿನ್ಮಯ್, ಎನ್.ಸಿ.ಸಿ ಎವಿಕೆ ಮಹಿಳಾ ಕಾಲೇಜ್‍ನಿಂದ ಅಶ್ವಿನಿ ಬಾಯಿ.ಯು, ಎನ್.ಸಿ.ಸಿ ಜಿ.ಎಂ.ಐ.ಟಿ. ಕಾಲೇಜ್‍ನಿಂದ ಹರ್ಷಿತ್ ಮಲ್ಲಿಕಾರ್ಜುನ್, ಎನ್.ಸಿ.ಸಿ ಡಿಆರ್‍ಆರ್ ಪಾಲಿಟೆಕ್ನಿಕ್ ಕಾಲೇಜ್‍ನಿಂದ ಮಹಮದ್ ರಿಹಾನ್ ರಾಝ, ಎನ್.ಸಿ.ಸಿ ಪಿಎಸ್‍ಎಸ್‍ಇಎಂಆರ್ ತೋಳಹುಣಸೆ ಶಾಲೆಯಿಂದ ಭಾವನ.ಜಿ, ಎನ್.ಸಿ.ಸಿ ಸೆಂಟ್ ಪಾಲ್ಸ್ ಸ್ಕೂಲ್ ಚಂದನಶ್ರೀ, ಭಾರತ್ ಸೇವಾದಳ ಜಿಲ್ಲಾ ತಂಡ ಬಿಂದು ಎಂ, ಪೊಲೀಸ್ ಪಬ್ಲಿಕ್ ಶಾಲೆಯಿಂದ ಸುಜಯ್ ಹೆಚ್ ಗೌಡ, ಪಿಎಸ್‍ಎಸ್‍ಇಎಂಆರ್ ಶಾಲೆಯಿಂದ ಮಧುಸೂಧನ ಮಾಲಿ ಪಾಟೀಲ್, ರಾಷ್ಟ್ರೋತ್ಥಾನ ಸ್ಕೂಲ್ ತನ್ಮಯ್ ದೀಕ್ಷಿತ್, ಜೈನ್ ಪಬ್ಲಿಕ್ ಸ್ಕೂಲ್ ಸಾಯಿ ನೈನ, ಬಿ.ಹೆಚ್ ಪಿ.ಎಸ್ ಶಾಲೆಯಿಂದ ಅನುಶ್ರೀ, ಎಸ್‍ಎಸ್‍ಎನ್‍ಪಿಎಸ್ ಶಾಲೆಯಿಂದ ವೇದ.ಹೆಚ್.ಎನ್, ಸೇಂಟ್ ಪಾಲ್ ಸೆಂಟ್ರಲ್ ಸ್ಕೂಲ್ ನಿಂದ ಶ್ರೀಲೇಖ, ಜವಾಹರ್ ನವೋದಯ ವಿದ್ಯಾಲಯ ಶಾಲೆಯಿಂದ ಯುವರಾಜ್, ಪುಪ್ಪಾ ಮಹಾಲಿಂಗಪ್ಪ ಶಾಲೆಯಿಂದ ಧ್ರುವ ಎಸ್ ಗೌಡ, ಕೇಂದ್ರಿಯ ವಿದ್ಯಾಲಯದಿಂದ ದಿಲೀಪ್, ಸರ್ಟಿಫೈಡ್ ಸ್ಕೂಲ್‍ನಿಂದ ಅಜಯ್, ಮೌನೇಶ್ವರಿ ಕಿವುಡ ಮತ್ತು ಮೂಗರ ಶಾಲೆಯಿಂದ ತಿಪ್ಪೇಸ್ವಾಮಿ, ಸಿದ್ಧಗಂಗಾ ಹೈಯರ್ ಪ್ರೈಮರಿ ಸ್ಕೂಲ್‍ನಿಂದ ರಶ್ಮಿ, ಭಾರತ ಸ್ಕೌಟ್ಸ್ & ಗೈಡ್ಸ್ ಡಿಸ್ಟ್ರಿಕ್ ಟ್ರೂಪ್‍ನಿಂದ ಪ್ರೇರಣಾ, ಸೇಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಿಂದ ಗೀತಾಂಜಲಿ, ಡಿಎಆರ್‍ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡದಿಂದ ರಾಷ್ಟ್ರಗೀತೆ ಸಹಿತ, ಶುಶ್ರಾವ್ಯ ವಾದ್ಯ ಪ್ರಸ್ತುತಪಡಿಸಿದರು.
ಶಿಸ್ತಿನ ಪಥಸಂಚಲನ – ಪ್ರಶಸ್ತಿ : ಯುನಿಫಾರಂ ವಿಭಾಗದಲ್ಲಿ ಡಿಎಆರ್ ಪ್ರಥಮ, ಅಗ್ನಿಶಾಮಕ ದಳ ದ್ವಿತೀಯ,
ಕಾಲೇಜು ವಿಭಾಗ ಎನ್‍ಸಿಸಿ ಡಿ.ಆರ್.ಎಂ. ವಿಜ್ಞಾನ ಕಾಲೇಜು ಪ್ರಥಮ, ಎ.ಆರ್.ಜಿ ಕಾಲೇಜು ದ್ವಿತೀಯ, ಜಿ.ಎಂ.ಐ.ಟಿ ಕಾಲೇಜು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಿಶೇಷ ವಿಭಾಗದಲ್ಲಿ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡ ಪ್ರಥಮ, ಸರ್ಟಿಫೈಡ್ ಸ್ಕೂಲ್ ದ್ವಿತೀಯ, ಮೌನೇಶ್ವರಿ ಕಿವುಡ ಮತ್ತು ಮೂಗರ ಶಾಲೆ ತೃತೀಯ, ಪ್ರೌಢಶಾಲಾ ವಿಭಾಗದಲ್ಲಿ: ಸೇಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಥಮ, ರಾಷ್ಟ್ರೋತ್ಥಾನ ಸ್ಕೂಲ್ ದ್ವಿತೀಯ, ಪಿಎಸ್‍ಎಸ್‍ಇಎಂಆರ್ ಶಾಲೆ ತೃತೀಯ, ಪ್ರಾಥಮಿಕ ವಿಭಾಗದಲ್ಲಿ: ಪೊಲೀಸ್ ಪಬ್ಲಿಕ್ ಶಾಲೆ ಪ್ರಥಮ, ಜೈನ್ ಪಬ್ಲಿಕ್ ಶಾಲೆ ದ್ವಿತೀಯ, ಎಸ್‍ಎಸ್‍ಎನ್‍ಪಿಎಸ್ ಶಾಲೆ ತೃತೀಯ ಸ್ಥಾನ ಲಭಿಸಿತ್ತು.
ಕಣ್ಮನ ಸೆಳೆದ ಸಾಂಸ್ಕøತಿಕ ಕಾರ್ಯಕ್ರಮಗಳು: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಲ್ ಇಕ್ರಾ ಶಾಲೆ, ಡಿ.ಆರ್.ಆರ್ ಶಾಲೆಗಳು, ಸೆಂಟ್ ಜಾನ್ಸ್ ಪ್ರೌಢಶಾಲೆಯ ಮಕ್ಕಳು ದೇಶಪ್ರೇಮ, ತ್ಯಾಗ, ಬಲಿದಾನದ ಸಾರವನ್ನು ಹೊಂದಿದಂತಹ ನೃತ್ಯರೂಪಕಗಳನ್ನು ಪ್ರದರ್ಶಿಸಿದ್ದು ನೋಡುಗರ ಕಣ್ಮನ ಸೆಳೆಯುವಂತಿತ್ತು.ಡಿ.ಆರ್.ಆರ್ ಶಾಲೆಗಳ ತಂಡ ಪ್ರಥಮ ಸ್ಥಾನ, ಅಲ್ ಇಕ್ರಾ ಶಾಲೆಯ ಮಕ್ಕಳು ದ್ವಿತೀಯ ಸ್ಥಾನ, ಸೆಂಟ್ ಜಾನ್ಸ್ ಪ್ರೌಢಶಾಲೆಯ ಮಕ್ಕಳು ತೃತೀಯ ಸ್ಥಾನ ಪಡೆದರು.
ಸನ್ಮಾನ ಸ್ವೀಕರಿಸಿದವರು: ಅಪಘಾತದಲ್ಲಿ ಮರಣ ಹೊಂದಿದ ದಿ.ಶ್ರೀ.ಸುಚಿತ್ ಕುಮಾರ್ ಯು.ಎನ್, ಇವರ ಅಂಗಾಂಗಗಳನ್ನು ದಾನ ಮಾಡಿದ ಅವರ ತಾಯಿಯಾದ ಶ್ರೀಮತಿ,ವಾಣಿಶ್ರೀರವರಿಗೆ ಪ್ರಶಂಸಾ ಪತ್ರ ನೀಡಲಾಯಿತು. ಲಿಂಗನಗೌಡ ನೆಗಳೂರು, ಸಿಪಿಐ, ಸಂತೆಬೆನ್ನೂರು ವೃತ್ತ ಇವರು ಆಗಸ್ಟ್ 2024ರಲ್ಲಿ ಉತ್ತಮ’ ಕರ್ತವ್ಯಕ್ಕಾಗಿ ಮುಖ್ಯಮಂತ್ರಿಗಳ ಪದಕ ಪಡೆದಿರುತ್ತಾರೆ. ತೇಜಾವತಿ, ಪಿ.ಐ. ನಿಸ್ತಂತು ವಿಭಾಗ, ದಾವಣಗೆರೆ ಇವರು ಆಗಸ್ಟ್ 2024ರಲ್ಲಿ ಉತ್ತಮ ಕರ್ತವ್ಯಕ್ಕಾಗಿ ಮುಖ್ಯಮಂತ್ರಿಗಳ ಪದಕ ಪಡೆದಿರುತ್ತಾರೆ. ಮಂಜುನಾಥ ಕಲ್ಲೇದೇವರು, ಪಿಎಸ್‍ಐ, ಎಫ್.ಪಿ.ಬಿ ಘಟಕ ಅಗಸ್ಟ್ 2024ರಲ್ಲಿ ಉತ್ತಮ ಕರ್ತವ್ಯಕ್ಕಾಗಿ ರಾಷ್ಟ್ರಪತಿಗಳ ಪೆÇಲೀಸ್ ಪದಕ, .ಹೆಚ್.ದಾದಾಪೀರ್, ಎ.ಆರ್.ಎಸ್.ಐ.ಡಿ.ಎ.ಆರ್ ಆಗಸ್ಟ್ 2024ರಲ್ಲಿ ಪವರ್ ಲಿಪ್ಪಿಂಗ್, ಉತ್ತಮ ಕರ್ತವ್ಯಕ್ಕಾಗಿ ರಾಷ್ಟ್ರಪತಿಗಳ ಪೆÇಲೀಸ್ ಪದಕ, 23-9-2023 ರಿಂದ 31-12-2023ರವರೆಗೆ ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಯಾತ್ರೆ ಮೂಲಕ ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತು ಜನಜಾಗೃತಿ ಮಾಡಿ ಕೇಂದ್ರ ಸರ್ಕಾರದ ಆರುಷಿ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಿದ ಹೊನ್ನಾಳಿ ತಾಲ್ಲೂಕಿನ ಸಿ.ಎಮ್.ಜಕ್ಕಾಳಿ, 2024ನೇ ಸಾಲಿನ ಗಣರಾಜ್ಯೋತ್ಸವ ಪೆರೇಡ್ ದಾವಣಗೆರೆ ಜಿಲ್ಲೆಯಿಂದ ದೆಹಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕರ್ನಾಟಕ ಮತ್ತು ಗೋವಾ ತಂಡವನ್ನು ಮೂರು ವಿದ್ಯಾರ್ಥಿಗಳು ಪ್ರತಿ ನಿಧಿಸಿದ ಎನ್.ಸಿ.ಸಿ. ಕೆಡೆಟ್ ಗಗನ್ ದೀಪ್ ಬಿ.ಎಸ್ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ), ಶ್ರೇಯನ್ ಸಿ (ತರಳಬಾಳ ಪ.ಪೂ.ಕಾಲೇಜು, ದಾವಣಗೆರೆ), ಗೌತಮಿ ಆರ್. (ಸಂತ ಪೌಲರ ಸ್ಕೂಲ್, ದಾವಣಗೆರೆ) 9 ವ್ಯಕ್ತಿಗಳಿಗೆ ಸನ್ಮಾನ ನೀಡಿ ಗೌರವಿಸಲಾಯಿತು.
ನಗರದ ವಿಶ್ವೇಶ್ವರಯ್ಯ ಉದ್ಯಾವನದಲ್ಲಿ ಹಾಗೂ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸಂವಿಧಾನ ಪೀಠಿಕೆಯನ್ನು ಸ್ಥಾಪಿಸಲಾಗಿದ್ದು ಗಣಿ ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು.
ಈ ವೇಳೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಮೇಯರ್ ಚಮನ್‍ಸಾಬ್.ಕೆ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಉಪಮೇಯರ್ ಸೋಗಿ ಶಾಂತಕುಮಾರ್, ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ರವಿಕಾಂತೇಗೌಡ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ., ಎಸ್ಪಿ ಉಮಾ ಪ್ರಶಾಂತ್, ಜಿ.ಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಮತ್ತಿತರರಿದ್ದರು.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
