ದಾವಣಗೆರೆ: ಜಿಲ್ಲೆಯ ವಿವಿಧ ಕಡೆ ನಿನ್ನೆ(ಜೂ.19) ಸಂಜೆ ಸಾಧಾರಣ ಮಳೆಯಾಗಿದ್ದು, ಹರಿಹರದಲ್ಲಿ ಜೋರು ಮಳೆಯಾಗಿದೆ. ಜಿಲ್ಲೆಯಲ್ಲಿ ಸುಡು ಬಿಸಿಲಿನಿಂದ ಏರಿದ್ದ ತಾಪಮಾನ ಸಂಜೆ ಮಳೆಯಿಂದ ತುಸು ತಂಪೆರೆದಂತಾಗಿದೆ.
ಹರಿಹರದಲ್ಲಿ ಸಂಜೆ ಜೋರು ಮಳೆಯಾಗಿದ್ದು, ಮಳೆ ನೀರು ಹರಿದಾಡುವಂತೆ ಹದ ಮಳೆಯಾಗಿದೆ. ಬಿಸಿಲಿನ ತಾಪದಿಂದ ಬಳಲಿದ್ದ ಜನಕ್ಕೆ ಮಳೆ ತುಸು ನೆಮ್ಮದಿ ತಂದಿದೆ. ದಾವಣಗೆರೆ, ಹರಿಹರ ತಾಲ್ಲೂಕಿನ ಕಡರನಾಯ್ಕನಹಳ್ಳಿ, ಮಲೇಬೆನ್ನೂರು,ಹೊನ್ನಾಳಿ ತಾಲ್ಲೂಕಿನ ಕೆಲ ಭಾಗಗಳಲ್ಲೂ ಸಾಧಾರಣ ಮಳೆಯಾಗಿದೆ.
ಹರಿಹರದಲ್ಲಿ ಸಂಜೆ 7ರಿಂದ 8ರ ವರೆಗೆ ಜೋರು ಮಳೆಯಾಗಿದೆ. ಒಂದು ತಾಸು ಸುರಿದ ಮಳೆಗೆ ನಗರದ ಎಲ್ಲಾ ಚರಂಡಿಗಳು ತುಂಬಿ ರಸ್ತೆಗಳಲ್ಲಿ ನೀರು ಹರಿದವು. ಇನ್ನೂ ತಗ್ಗು ಪ್ರದೇಶ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಟ ನಡೆಸಿದರು. ಇನ್ನೂ ಐದು ದಿನಗಳಲ್ಲಿ ಮುಂಗಾರು ಮಳೆ ರಾಜ್ಯದಲ್ಲಿ ಇನ್ನಷ್ಟು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.