ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನದಿಂದ ಭಾರಿ ಮಳೆಯಾಗುತ್ತಿದ್ದು, ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದೆ. ನಿನ್ನೆ (ಮೇ 18) ತಡ ರಾತ್ರಿವರೆಗೂ ಜೋರು ಮಳೆಯಾಗಿದ್ದು, ಇಂದು (ಮೇ 19) ಮಧ್ಯಾಹ್ನ ಸಹ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಅಲ್ಪ ಸಲ್ಪ ಭತ್ತದ ಬೆಳೆ ಬಿರುಗಾಳಿ, ಮಳೆಗೆ ನೆಲಕಚ್ವಿದೆ.
ಹರಿಹರ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ದಾವಣಗೆರೆ, ಜಗಳೂರು, ಸಂತೇಬೆನ್ನೂರು, ಮಲೇಬೆನ್ನೂರು, ಮಾಯಕೊಂಡ ಸೇರಿ ಎಲ್ಲಾ ಕಡೆ ಉತ್ತಮ ಮಳೆಯಾಗಿದೆ. ಇದರಿಂದ ಮುಂಗಾರು ಬೆಳೆಗೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚಾಲನೆ ಸಿಕ್ಕಾಂತಾಗಿದೆ. ಜೋರು ಮಳೆ, ಗಾಳಿ ಪರಿಣಾಮ ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದಲ್ಲಿ ಫಸಲಿಗೆ ಬಂದಿದ್ದಂತಹ ನೂರಾರು ಎಕರೆ ಪ್ರದೇಶದಲ್ಲಿನ ಭತ್ತ ಬೆಳೆ ನೆಲಕಚ್ಚಿದೆ. ರೈತರು ಕಷ್ಟಪಟ್ಟು ಬೆಳೆದ ಕಟಾವು ಹಂತದ ಭತ್ತ ನೆಲಕಚ್ಚಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ಬಾರಿ ತೀವ್ರ ಬರದ ನಡುವೆ ಬೆಳೆದ ಅಲ್ಪ ಸ್ವಲ್ಪ ಬೆಳೆ ಸಹ ಕೈಗೆ ಬಂದ ತುತ್ತು, ಬಾಯಿಗೆ ಬಾರದಂತಾಗಿದೆ.
ರೈತರಿಗೆ ಮಳೆಯಾಗಿದ್ದು ಒಂದು ಕಡೆ ಸಂತಸ ತಂದರೆ, ಮತ್ತೊಂದೆಡೆ ಬೆಳೆದ ಭತ್ತ ನೀರು ಪಾಲಾಗಿರುವುದರಿಂದ ರೈತರಿಗೆ ಸಂಕಷ್ಟ ತಂದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಮಾಡಿ ನಷ್ಟ ಭರಿಸಿಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.



