ದಾವಣಗೆರೆ: ಬಿರು ಬಿಸಿಲ ತಾಪಮಾನದಿಂದ ತತ್ತರಿಸಿದ್ದ ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆ ಧರೆಗೆ ಇಳಿದಿದೆ. ಕಾದ ಕಾವಲಿಯಂತಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ. ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು, ಹೆಬ್ಬಾಳು ಸುತ್ತಮುತ್ತ ಬುಧವಾರ (ಏ.3) ಸಂಜೆ ವರ್ಷದ ಮೊದಲ ಮಳೆಯಾಗಿದೆ.
ಬಿಲಿನ ತೀವ್ರತೆಗೆ ಜನ-ಜಾನುವಾರು ಕುಡಿಯುವ ನೀರಿಲ್ಲ, ಒಣಗಿದ ಹಳ್ಳ-ಕೊಳ್ಳ, ನೀರಿಲ್ಲದೆ ಅಡಿಕೆ ತೋಟ ಬದುಕಿಸಿಕೊಳ್ಳಲು ಪರದಾಟ ನಡೆಸುತ್ತಿದ್ದ ರೈತರಿಗೆ ಜಿಲ್ಲೆಯ ವರ್ಷದ ಮಿದಲ ಮಳೆ ತುಸು ನೆಮ್ಮದಿ ನಿಟ್ಟುಸಿರು ಬಿಡುವಂತಾಯಿತು. ಆನಗೋಡು, ಹೆಬ್ಬಾಳ್, ಮಾಯಕೊಂಡ, ಹುಚ್ಚವ್ವನಹಳ್ಳಿ ಸುತ್ತಮುತ್ತ ಸಂಜೆ ಇದ್ದಕ್ಕಿದ್ದಂತೆ ಜೋರು ಗಾಳಿ ಬೀಸಿ, ದಟ್ಟಮೋಡಗಳು ಆವರಿಸಿದವು. ಮಳೆಗೆ ಕಾಯುತ್ತಿದ್ದ ಜನ, ಮಳೆ ಕಂಡು ಪುಳಕಿತರಾಗಿದ್ದರು. ಸುಮಾರು 45-50 ನಿಮಿಷ ಕಾಲ ಜೋರು ಮಳೆಯಾಗಿದೆ.
ವರ್ಷದ ಮೊದಲ ಮಳೆ ಹನಿಗಳು ಭೂಮಿಗೆ ಬಿದ್ದು ಹೊಮ್ಮಿದ ಮಣ್ಣಿನ ವಾಸನೆ ಎಲ್ಲೆಡೆ ಪಸರಿಸಿತ್ತು. ದಾವಣಗೆರೆ, ಹರಿಹರ ಭಾಗದಲ್ಲಿ ದಟ್ಟಮೋಡ ಆವರಿಸಿದರೂ, ಮಳೆಯಾಗಲಿಲ್ಲ. ಭರಮಸಾಗರದ ಕಡೆಯಲ್ಲಿಯೂ ಜೋರು ಮಳೆಯಾಗಿದೆ.



