ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನದಿಂದ ಭಾರಿ ಮಳೆ ಸುರಿಯುತ್ತಿದೆ. ಭಾರಿ ಮಳೆಗೆ ದಾವಣಗೆರೆ ನಗರ ಪ್ರದೇಶದ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆ ಅಬ್ಬರಕ್ಕೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ರೈತರ ಬೆಳೆದಿದ್ದ ಭತ್ತ, ಮೆಕ್ಕೆಜೋಳ, ತರಕಾರಿ ಬೆಳೆ ಜಲಾವೃತವಾಗಿವೆ.
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯ ದೊಡ್ಡಘಟ್ಟ-ಚಿರಡೋಣಿ ನಡುವೆ ಸೂಳೆಕೆರೆ ಹಳ್ಳದ ರಭಸಕ್ಕೆ ಸೇತುವೆ ದಾಟುತ್ತಿದ್ದ ಪಡಿತರ ರಾಗಿ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಪಡಿತರ ರಾಗಿ ನೀರುಪಾಲಾಗಿದೆ.
ಜಿಲ್ಲೆಯಲ್ಲಿ ಬುಧವಾರ ಇಡೀ ದಿನ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಸಂತೇಬೆನ್ನೂರಿನ ಕೋಟೆ ರಸ್ತೆ ಭಾಗದಲ್ಲಿ ಮೂರು ಮನೆಗಳ ಗೋಡೆ ಕುಸಿದಿದೆ. ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ಗುಳದಹಳ್ಳಿ, ಸಂಕ್ಲೀಪುರ, ಆದಾಪುರ, ನಿಟ್ಟೂರು ಗ್ರಾಮದ ವ್ಯಾಪ್ತಿಯಲ್ಲಿ ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ.
ದಾವಣಗೆರೆ ನಗರದ ಈರುಳ್ಳಿ ಮಾರ್ಕೆಟ್ ಅಂಡರ್ ಪಾಸ್ ಹತ್ತಿರ ನೀರು ತುಂಬಿಕೊಂಡಿದ್ದು, ವಾಹನ ಓಡಾಡಲು ತೊಂದರೆಯಾಗಿತ್ತು. ಕೂಡಲೇ ಮಹಾನಗರ ಪಾಲಿಕೆ ಮಹಾಪೌರರಾದ ಎಸ್. ಟಿ. ವೀರೇಶ್ ಹಾಗೂ 19 ನೇ ವಾರ್ಡಿನ ಸದಸ್ಯರಾದ ಶಿವಪ್ರಕಾಶ್ ಕೂಡಲೇ ಸ್ಥಳಕ್ಕೆ ಆಗಮಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರು. ಇನ್ನು ಪಿಬಿ ರಸ್ತೆಯಲ್ಲಿ ತುಂಬಿದ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು.