ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರಯಲ್ಲಿ ನವೀಕೃತಗೊಂಡ ರೈಲು ನಿಲ್ದಾಣದ ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ. ಹಲವು ವಿಶೇಷತೆಯೊಂದಿಗೆ ಕಂಗೊಳಿಸುತ್ತಿರುವ ರೈಲ್ವೆ ನಿಲ್ದಾಣ, ಜನರನ್ನು ತನ್ನತ್ತ ಸೆಳೆಯುತ್ತಿರುವ ಆಕರ್ಷಣೆ ಹೊಂದಿದೆ.
ದಾವಣಗೆರೆ ರೈಲು ನಿಲ್ದಾಣ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ವ್ಯಾಪ್ತಿಗೆ ಒಳಪಡಲಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದ್ದ ರೈಲು ನಿಲ್ದಾಣ ಇದೀಗ ಸಂಪೂರ್ಣವಾಗಿ ನವೀಕರಿಸಲಾಗಿದೆ. ಆಧುನಿಕ ಎಲ್ಲ ಸೌಲಭ್ಯಗಳನನ್ನು ಒಳಗೊಂಡ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿದೆ. ಸುಮಾರು 18.45 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣವನ್ನು ನವೀಕರಿಸಲಾಗಿದೆ.

ಕರ್ನಾಟಕದ 5 ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಸೌಲಭ್ಯವಿದ್ದು, ಇದರಲ್ಲಿ ದಾವಣಗೆರೆ ಸಹ ಒಂದಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬಳ್ಳಾರಿ ನಿಲ್ದಾಣದಲ್ಲಿ ಈ ಸೌಲಭ್ಯವಿದೆ. ರೈಲು ನಿಲ್ದಾಣದ ಕಟ್ಟಡವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಇನ್ನು ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್, ಎರಡು ಕಡೆ ಎಸ್ಕಲೇಟರ್, ಟಿಕೆಟ್ ವಿತರಣಾ ಕೊಠಡಿ ಸೇರಿ ಸುಮಾರು 18.45 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣವನ್ನು ನವೀಕರಣ ಮಾಡಲಾಗಿದೆ.

ನಿಲ್ದಾಣದ ಮುಂದೆ ‘ಐ ಲವ್ ಡಿವಿಜಿ’ ಎಂದು ಕೆಂಪು ಬಣ್ಣದಲ್ಲಿ ಬರೆದ ಫಲಕವಿದ್ದು, ಇದು ನಿಲ್ದಾಣದ ಸೆಲ್ಫೀ ಸ್ಟಾಟ್ ಆಗಿದೆ. 100 ಅಡಿ ಎತ್ತರದ ರಾಷ್ಟ ಧ್ವಜ ಸ್ತಂಭವನ್ನು ಸಹ ನಿರ್ಮಿಸಿಸಿದ್ದು, ಇದು ನಿಲ್ದಾಣದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಕೋವಿಡ್ ಲಾಕ್ ಡೌನ್‌ಗೂ ಮೊದಲು 44 ರೈಲುಗಳು ದಾವಣಗೆರೆ ರೈಲು ನಿಲ್ದಾಣದಿಂದ ಸಂಚಾರ ನಡೆಸುತ್ತಿದ್ದವು. ಈಗ ವಿಶೇಷ ರೈಲುಗಳು ಮಾತ್ರ ಸಂಚಾರ ನಡೆಸುತ್ತಿದ್ದು, ದಿನಕ್ಕೆ 22 ರೈಲು ಸಂಚರಿಸುತ್ತಿವೆ. ಏಪ್ರಿಲ್ ಬಳಿಕ ಪ್ರತಿದಿನ 36 ರೈಲುಗಳು ಸಂಚಾರ ನಡೆಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಆದಾಯ ತಂದು ಕೊಡುವ ಎರಡನೇ ನಿಲ್ದಾಣ ದಾವಣಗೆರೆಯಾಗಿದೆ. ಇಂತಹ ನಿಲ್ದಾಣ ಇದೀಗ ನವೀಕರಣಗೊಂಡಿದ್ದು, ನಿಲ್ದಾಣದಲ್ಲಿ ಗಣ್ಯ ವ್ಯಕ್ತಿಗಳ ವಿಶ್ರಾಂತಿ ಕೊಠಡಿ ಸೇರಿದಂತೆ 23 ಕೊಠಡಿಗಳನ್ನು ಹೊಂದಿದೆ. ಏಪ್ರಿಲ್ ತಿಂಗಳಿನಲ್ಲಿ ರೈಲು ನಿಲ್ದಾಣ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ.



