ದಾವಣಗೆರೆ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಆಗ್ರಹಿಸಿ ಹಿಂದೂ ಸಂಘಟನೆ ಹಾಗೂ ಮಹಾರಾಜರ ಯುವಕರ ಸಂಘ ಬಡಾವಣೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ನಗರದ ಬಸವರಾಜಪೇಟೆಯಲ್ಲಿ ನಿನ್ನೆ (ಅ.13) ರಾತ್ರಿ ಗಣೇಶೋತ್ಸವ ಮೆರವಣಿಗೆಗೆ ಅನ್ಯ ಕೋಮಿನವರು ಅಡ್ಡಿಪಡಿಸಿದ್ದಾರೆ. ನಮ್ಮ ಏರಿಯಾದಲ್ಲಿ ಡಿ.ಜೆ. ಹಾಕುವಂತಿಲ್ಲ ಎಂದು ಮೆರವಣಿಗೆ ಬಂದ್ ಮಾಡಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜಯದೇವ ವೃತ್ತದಿಂದ ಬಡಾವಣೆ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು. ಮಹಾರಾಜರ ಯುವಕರ ಸಂಘದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಮೆರವಣಿಗೆಯಲ್ಲಿದ್ದ ಯುವಕರ ಮೇಲೆ ಥಳಿಸಿ, ಡಿಜೆ ಕಿತ್ತು ಹಾಕಿದ ಪೊಲೀಸ್ ಅಧಿಕಾರಿ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದೂ ಒತ್ತಾಯಿಸಿದರು.
ಎಸ್ಪಿ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಬೇಕೆಂದು ಪಟ್ಟುಹಿಡಿದರು. ಸ್ವಲ್ಪ ಸಮಯದ ನಂತರ ಪ್ರತಿಭಟನೆ ಸ್ಥಳಕ್ಕೆ ಬಂದ ಎಸ್ಪಿ ಉಮಾ ಪ್ರಶಾಂತ್, ಮನವಿ ಪತ್ರವನ್ನು ಪರಿಶೀಲಿಸಿ ಸೂಕ್ತ ಕ್ರಮ ತಗೆದುಕೊಳ್ಳಲಾಗುವುದು ಎಂದು ತಿಳಿಸಿದರು.



