ದಾವಣಗೆರೆ: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿ ಅಂತರ್ಯುದ್ಧ ದಿನದಿಂದ ದಿನಕ್ಕೆ ಜೋರಾಗಿದೆ. ಎರಡು ಬಣಗಳ ನಡುವೆ ಪ್ರತಿ ದಿನ ವಾಕ್ಸಮರ ಮುಂದುವರೆದಿದೆ. ಶಾಸಕರಾಗಿ ಆಯ್ಕೆಯಾದಾಗನಿಂದಲೂ ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮತ್ತೊಮ್ಮೆ ನಾಯಕತ್ವ ಬದಲಾವಣೆ ಬಗ್ಗೆ ಮಾತಾಡಿದ್ದಾರೆ.
ಸೂರ್ಯ ಪಥ ಬದಲಾವಣೆ ಆಗಿ ಒಳ್ಳೆದಾಗುತ್ತೆ
ಸುದ್ದಿಗಾರರೊಂದಿಗೆ ಮಾತನಾಡಿ, ಸೂರ್ಯಪಥ ಬದಲಾವಣೆಯಿಂದ ಕಳೆದ ವರ್ಷ ಬೇರೆಯವರಿಗೆ ಒಳ್ಳೆದು ಆಗಿರಬಹುದು, ಈ ವರ್ಷ ನಮಗೆ ಒಳ್ಳೆದು ಆಗಬಹುದು. ಕಾದು ನೋಡೋಣ’ ಎಂದಿದ್ದಾರೆ.ನನ್ನ ಟಿಕೆಟ್ ಅನೌನ್ಸ್ ಆದಾಗಿನಿಂದ ಡಿಕೆಶಿಯವರು ಸಿಎಂ ಆಗಬೇಕು ಎಂಬ ಆಸೆಯನ್ನು ಇಟ್ಟುಕೊಂಡವನು. ಸಂಕ್ರಾಂತಿಯಲ್ಲಿ ಸೂರ್ಯ ಪಥ ಬದಲಾವಣೆ ಆಗಿ ಒಳ್ಳೆದಾಗುತ್ತೆ. ಅದು ಯಾರಿಗೆ ಒಳ್ಳೆದು ಆಗುತ್ತೋ ಕಾದು ನೋಡೋಣ ಎಂದು ತಿಳಿಸಿದರು.
ಹೈಕಮಾಂಡ್ ದಲಿತ ಸಿಎಂ ಅನ್ನಬಹುದು, ಬ್ರಾಹ್ಮಣ ಸಿಎಂ ಅನ್ನಬಹುದು. ಒಕ್ಕಲಿಗ, ಅಹಿಂದ ಸಿಎಂ ಅನ್ನಬಹುದು. ಯಾರನ್ನೇ ಮಾಡಿದರೂ ನಮ್ಮ ಅಭ್ಯಂತರ ಇಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ.ಕೇವಲ ಸಿಎಂ ಖುರ್ಚಿ ಬಗ್ಗೆ ಮಾತ್ರ ಒಪ್ಪಂದ ಅಂತ ಏಕೆ ಅಂದುಕೊಳ್ತಿರಾ, ವರ್ಕ್ ವಿಚಾರವಾಗಿರಬೇಕು, ಬೇರೆ ಏನಾದರೂ ಇರಬಹುದು. ಅದಕ್ಕೆ ಒಪ್ಪಂದ ಆಗಿರಬಹುದು. ಈ ಮಾಧ್ಯಮವರಿಗೆ ಏನಾದರೂ ಸಿದ್ದರಾಮಯ್ಯ ಮೇಲೆ ವಿರೋಧ ಇದ್ಯಾ? ಅವರನ್ನು ಸಿಎಂ ಸ್ಥಾನದಿಂದ ಇಳಿಸುವಲ್ಲಿ ನಿಮ್ಮ ಪ್ರಯತ್ನ ಇದ್ದಂತೆ ಕಾಣುತ್ತದೆ ಎಂದಿದ್ದಾರೆ.
‘ದಲಿತರು ಸಿಎಂ ಆಗಬಾರದು ಅಂತ ಎಲ್ಲೂ ಇಲ್ಲ. ಎಲ್ಲ ಸಮುದಾಯದವರಿಗೂ ಶಕ್ತಿ ಇದೆ. ಎಲ್ಲಾ ಸಮುದಾಯದಲ್ಲಿಯೂ ಶಕ್ತಿ ಇರುವ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ. ಬೇರೆ ಪಕ್ಷದಲ್ಲಿ ಇದ್ದಾರೋ, ಇಲ್ವೋ ಗೊತ್ತಿಲ್ಲ. ಯಾರಾದರೂ ನಾವು ಸ್ವಾಗತ ಮಾಡುತ್ತೇವೆ’ ಎಂದು ಶಿವಗಂಗಾ ಬಸವರಾಜ್ ಹೇಳಿದ್ದಾರೆ.
ಆಂಜನೇಯ ಆಗಿದ್ದರೆ ಎದೆ ಸೀಳಿ ತೋರಿಸುತ್ತಿದ್ದೆ
‘ನನಗೆ ಡಿಕೆಶಿಯವರ ಮೇಲೆ ಅಭಿಮಾನ ಇದೆ, ಆಂಜನೇಯ ಆಗಿದ್ದರೆ ಎದೆ ಸೀಳಿ ತೋರಿಸುತ್ತಿದ್ದೆ. ಡಿಕೆಶಿ ಸಾಹೆಬ್ರು ಸಿಎಂ ಆಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದು ನಿಜ. ಆದರೆ, ಎಲ್ಲಿ ಕೂಡ ಸಿದ್ದರಾಮಯ್ಯರನ್ನು ಇಳಿಸಿ ಎಂದು ನಾನು ಹೇಳಿಲ್ಲ. ಎಲ್ಲೂ ಕೂಡ ಎರಡೂವರೆ ವರ್ಷ ಒಪ್ಪಂದ ಆಗಿದೆ ಅಂತ ಹೇಳಿಲ್ಲ’ ಎಂದರು.
ನಾವೆಲ್ಲರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ
‘ಸಿದ್ದರಾಮಯ್ಯನವರಿಗೆ ವಿಪಕ್ಷನಾಯಕರು ಕೆದಕಿ ಕೇಳಿದಾಗ ಹೈಕಮಾಂಡ್ ಎಂಬ ಪದ ಬಳಸಿದ್ದಾರೆ. ನಾನೂ ಹೈಕಮಾಂಡ್ ಎನ್ನುತ್ತಿದ್ದೇನೆ. ಡಿಕೆ ಶಿವಕುಮಾರ್ ಕೂಡಾ ಹೈಕಮಾಂಡ್ ಎನ್ನುತ್ತಿದ್ದಾರೆ. ಅದನ್ನು ನೀವು ಅರ್ಥಮಾಡಿಕೊಳ್ಳಿ. ಹೈಕಮಾಂಡ್ ನಾಳೆಯೇ ತೀರ್ಮಾನ ಮಾಡಿದ್ರೂ, ಹತ್ತು ವರ್ಷ ಬಿಟ್ಟು ತೀರ್ಮಾನ ಮಾಡಿದ್ರೂ ನಾವೆಲ್ಲರು ಅದಕ್ಕೆ ಬದ್ಧ’ ಎಂದು ತಿಳಿಸಿದ್ದಾರೆ.



