ದಾವಣಗೆರೆ: ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಒಡೆದ ಮನೆಯಾದ ಜಿಲ್ಲಾ ಬಿಜೆಪಿಯಲ್ಲಿ ಆರೋಪ, ಪ್ರತ್ಯಾರೋಪ ತೀವ್ರತೆ ಪಡೆದಿದೆ. ಇತ್ತೀಚೆಗೆ ದಾವಣಗೆರೆಯಲ್ಲಿ ಭಿನ್ನಮತೀಯರ ಸಭೆ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ವಿರುದ್ಧ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್. ಎ. ರವೀಂದ್ರನಾಥ್ ಕಿಡಿಕಾರಿದ್ದಾರೆ.
ನಗರದ ಹೊರ ವಲಯದ ಶಿರಮಗೊಂಡನಹಳ್ಳಿಯ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ನಿವಾಸದಲ್ಲಿ ಸಭೆ ಸೇರಿದ ಮಾಜಿ ಶಾಸಕರು, ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು, ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು ಇತ್ತೀಚೆಗೆ ಭಿನ್ನರ ಸಭೆ ನಡೆಸಿದ ಸಿದ್ದೇಶ್ವರ ಹಾಗೂ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರವೀಂದ್ರನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಸರ್ಕಾರ ಪತನಕ್ಕೆ ಒಂದು ಸಾವಿರ ಕೋಟಿ ಹೊಂದಿಸಲಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ವಿಜಯಪುರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ನೀವು ಎಷ್ಟು ಕೋಟಿ ಖರ್ಚು ಮಾಡಿದ್ದಾರೆ..? ಇಂತಹ ವಿನಾಕಾರಣ ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ನೀಡದಂತೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಈ ಬಾರಿ ನಾವು ಚುನಾವಣೆಗಳಲ್ಲಿ ಸೋತಿದ್ದೇನೆ. ಗೆದ್ದಿದ್ದೇನೆ. ದಿ. ಜಿ. ಮಲ್ಲಿಕಾರ್ಜುನಪ್ಪ, ಸಿದ್ದೇಶ್ವರ ಒಟ್ಟು ಐದು ಜಯಭೇರಿ ಬಾರಿಸಿದೆ. ಒಮ್ಮೆ ಸೋತ ಮಾತ್ರಕ್ಕೆ ಏನೇನೋ ಕಳೆದುಕೊಂಡಿಲ್ಲ. ಎಲ್ಲರೂ ಒಟ್ಟಾಗಿ ಹೋಗೋಣ. ಪಕ್ಷ ಸಂಘಟಿಸೋಣ. ಮುಂದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಪ್ರಯತ್ನ ಮಡೋಣ ಎಂದು ಹೇಳಿದರು.
ಎಂ. ಪಿ. ರೇಣುಕಾಚಾರ್ಯ ಮಾತನಾಡಿ , ಎಸ್. ಎ. ರವೀಂದ್ರನಾಥ್ ಅವರು ಬಿ. ಎಸ್. ಯಡಿಯೂರಪ್ಪನವರಷ್ಟೇ ಹಿರಿಯರು. ಪಕ್ಷ ಕಟ್ಟಲು ಸಾಕಷ್ಟು ಶ್ರಮಿಸಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಪಕ್ಷಕ್ಕಾಗಿ ದುಡಿದಿರುವ ರವೀಂದ್ರನಾಥ್ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗ ಇದೆ. ಮೊದಲಿನಿಂದಲೂ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಆಪ್ತರಾಗಿದ್ದ ಸಿದ್ದೇಶ್ವರ ಲೋಕಸಭಾ ಚುನಾವಣೆ ಸೋಲಿನ ಬಳಿಕ ವರಸೆ ಬದಲಿಸಿದ್ದಾರೆ ಕಿಡಿಕಾರಿದರು.
ಹಾದಿ ಬೀದಿಯಲ್ಲಿ ಎಲ್ಲೆಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದಾರೆ. ಸ್ವಯಂ ಘೋಷಿತ ನಾಯಕರಾಗಿರುವ ಯತ್ನಾಳ್ ನಾನೇ ಮುಂದಿನ ಮುಖ್ಯಮಂತ್ರಿ ಎಂಬುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಇನ್ನು ಎರಡು ಮೂರು ದಿನಗಳಲ್ಲಿ ಬೆಂಗಳೂರಿನಲ್ಲಿ ಹಾಲಿ, ಮಾಜಿ ಶಾಸಕರು, ಸಂಸದರು, ಮುಖಂಡರು ಸಭೆ ನಡೆಸಿ ಎಲ್ಲ ವಿಷಯಗಳು, ಕೆಲವರು ಅನಗತ್ಯವಾಗಿ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿರುವ ಬಗ್ಗೆ ಚರ್ಚೆ ಮಾಡಲಾಗುವುದು. ವರಿಷ್ಠರಿಗೆ ದೂರು ನೀಡಲಾಗುವುದು. ಪಕ್ಷದ ಮುಖಂಡರು ಯತ್ನಾಳ್ ಇತರರನ್ನು ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಆಗಲು ಒಂದು ಸಾವಿರ ಕೋಟಿ ಇಟ್ಟುಕೊಂಡಿದ್ದಾರೆ ಎಂದು ಹೇಳಿರುವ ಯತ್ನಾಳ್ ಅವರೇ ಒಂದು ಸಾವಿರ ಕೋಟಿ ಎಲ್ಲಿ ಎಂಬುದನ್ನು ತೋರಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತವರು, ಟಿಕೆಟ್, ಅಧಿಕಾರ ದೊರೆಯದ ಜಿ.ಎಂ. ಸಿದ್ದೇಶ್ವರ, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ ಸಭೆಗಳ ನಡೆಸುವ ಮೂಲಕ ಅನಗತ್ಯವಾದ ಗೊಂದಲ ಮೂಡಿಸುತ್ತಿದ್ದಾರೆ. ಪಕ್ಷಕ್ಕೆ ಒಳ್ಳೆಯ ಸಮಯ ಇರುವಾಗ ಗೊಂದಲದ ಹೇಳಿಕೆ ನೀಡುವುದು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ ಇದ್ದರು.