ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಮುಂದೆ ನಾಯಿ ಮರಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ, ಅವರು ಘನತೆಗೆ ತಕ್ಕಂತೆ ಮಾತನಾಡಲಿ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಮಾಯಕೊಂಡದ ಬೋರಗೊಂಡನಹಳ್ಳಿಯ ಎಚ್. ಗಿರಿಯಾಪುರ ಗ್ರಾಮದಲ್ಲಿ ನಿರ್ಮಿಸಿರುವ ಹಮಾಲರ ವಸತಿ ಗೃಹಗಳ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಗೌರವಯುತವಾಗಿ ಮಾತನಾಡಬೇಕು. ಎಲ್ಲೇ ಸಿಕ್ಕರೂ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಣ್ಣ ಅಂತಾ ಪ್ರೀತಿಯಿಂದ ಕರೆಯುತ್ತಾರೆ. ಆದರೆ, ಸಿದ್ದರಾಮಯ್ಯ ಅವರೇ ತನ್ನ ಗೌರವಕ್ಕೆ ಧಕ್ಕೆ ತಂದುಕೊಂಡಿದ್ದಾರೆ ಎಂದರು.
ಶೇಕಡಾ 40ರಷ್ಟು ಕಮಿಷನ್ ಪಡೆದ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಪರಿಸ್ಥಿತಿ ಏನಾಗಿದೆ.ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಸಂಘದವರು ಕಾಂಗ್ರೆಸ್ ಪಕ್ಷದ ಚೇಲಾಗಳು. ಆರೋಪ ಮಾಡುವುದು, ಗಾಳಿಯಲ್ಲಿ ಗುಂಡು ಹೊಡೆಯುವುದು ಆಗಬಾರದು. ದಾಖಲೆ ಕೊಟ್ಟು ಮಾತನಾಡಲಿ ಎಂದರು.
ನಾವು ಮತ್ತೆ ಕಾಂಗ್ರೆಸ್‌ಗೆ ಯಾವುದೇ ಕಾರಣಕ್ಕೂ ಹೋಗುವುದಿಲ್ಲ. ರಾಜಕೀಯ ಜೀವನ ಏನಿದ್ದರೂ ಬಿಜೆಪಿಯಲ್ಲಿ ಮಾತ್ರ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಒಡೆತನದ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ವನ್ಯಜೀವಿಗಳ ಪತ್ತೆ ಪ್ರಕರಣ ಸಂಬಂಧ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗುತ್ತದೆ. ಮುಂದಿನ ದಿನಗಳಲ್ಲಿ ನಿಮಗೇ ಗೊತ್ತಾಗಲಿದೆ. ಈಗಾಗಲೇ ಎಫ್‌ಐಆರ್ ದಾಖಲಾಗಿದೆ.ಈ ಪ್ರಕರಣದಲ್ಲಿ ಸ್ಥಳದ ಮಾಲೀಕರೇ ಹೊಣೆ ಎಂದರು.



