ದಾವಣಗೆರೆ: ಅವರಪ್ಪನ ಆಣೆಗೂ ನಮ್ಮ ಸರ್ಕಾರವನ್ನು ಯಾರಿಂದಲೂ ಕೆಡವಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಿಡಿಕಾರಿದರು.
ಕಾಂಗ್ರೆಸ್ ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿರುವ 60 ಜನ ಬಿಜೆಪಿ ಶಾಸಕರು 136 ಶಾಸಕರ ನಮ್ಮ ಕಾಂಗ್ರೆಸ್ ಸರ್ಕಾರವನ್ನು ಹೇಗೆ ಕೆಡವಲು ಸಾಧ್ಯ..? ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದು, ಇಡೀ ರಾಜ್ಯವೇ ಇದರಿಂದಾಗಿ ಹೊತ್ತಿ ಉರಿಯುತ್ತಿದೆ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎನ್ನುವ ಬಿಜೆಪಿಯವು ಕಳ್ಳರು. ಕೇಂದ್ರ ಸರ್ಕಾರ ತನ್ನ ಅಧಿಕಾರ, ಪ್ರಭಾವ ಬಳಸಿಕೊಂಡು, ಮುಡಾ ವಿಚಾರದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದೆ. ಜನ ಎಲ್ಲಾ ಗಮನಿಸುತ್ತಿದ್ದಾರೆ. ನಾವೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಇದ್ದೇವೆ ಎಂದರು.
ಆ.22ರಂದು ಸಿಎಲ್‌ಪಿ ಮೀಟಿಂಗ್ ಕರೆದಿದ್ದಾರೆ. ನಾನೂ ಸಹ ಸಭೆಗೆ ಹೋಗುತ್ತಿದ್ದೇನೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಡುವುದೂ ಇಲ್ಲ. ನಮ್ಮ ಸರ್ಕಾರಕ್ಕೆ ಏನೂ ಆಗೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಾವೆಲ್ಲರೂ ಒಗ್ಗಟ್ಟಿನಿಂದಲೇ ಇದ್ದೇವೆ. ಅವರಪ್ಪನಾಣೆಗೂ ನಮ್ಮ ಸರ್ಕಾರವನ್ನು ಕೆಡವಲು ಸಾಧ್ಯವೂ ಇಲ್ಲ. ನಮ್ಮ ಸರ್ಕಾರಕ್ಕೆ ಏನೂ ಆಗುವುದೂ ಇಲ್ಲ ಎಂದು ಹರಿಹಾಯ್ದರು.