ದಾವಣಗೆರೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಬಿಜೆಪಿ ಸೋಲಿನ ಬಳಿಕ ಉಂಟಾದ ಬಣ ರಾಜಕೀಯಕ್ಕೆ ಬ್ರೇಕ್ ಬೀಳುವ ಮುನ್ಸೂಚನೆ ಸಿಕ್ಕಿದೆ. ಮುಂಬರುವ ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ ಹಾಗೂ ಹರಿಹರ ಶಾಸಕ ಹರೀಶ್ ವಿರುದ್ಧ ದಾಖಲಾದ ಪ್ರಕರಣದಲ್ಲಿ ಎರಡು ಬಣಗಳು ಒಂದಾಗಿ ಹೋರಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಎರಡು ಬಣದ ನಾಯಕರು ಭಿನ್ನಮತ ಮರೆತು ಒಂದಾಗಿ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಎದುರಿಸಲು ಸಾಧ್ಯ ಎಂಬ ಲೆಕ್ಕಾಚಾರಕ್ಕೆ ಬಂದಂತೆ ಕಾಣುತ್ತಿದೆ.
ಈ ಬಗ್ಗೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಂದಾಗಿ ಹೋರಾಡಲು ನಿರ್ಧಾರಕ್ಕೆ ಬರಲಾಗಿದೆ. ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ದಾಖಲಾಗಿರುವ ಜಾತಿ ನಿಂದನೆ ಪ್ರಕರಣ ವಿರುದ್ಧ ಬಿಜೆಪಿ ನಾಯಕರು ಹೋರಾಟಕ್ಕೆ ಮುಂದಾಗಿದೆ. ಭಿನ್ನ ಬಣಗಳು ರಾಜಕೀಯ ಬಿಟ್ಟು ಒಗ್ಗಟ್ಟಿನಿಂದ ಹೋರಾಡಲು ನಿರ್ಧರಿಸಿದ್ದಾರೆ.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್ ಕಚೇರಿಯಲ್ಲಿ ಸಭೆ ಸೇರಲು ನೀಡಿದ ಆಹ್ವಾನವನ್ನು ಎರಡು ಬಣ ನಾಯಕರು ಒಪ್ಪಿಕೊಂಡಿದ್ದಾರೆ. ಜ.18ರಂದು ಎರಡು ಬಣಗಳು ಸಭೆ ಸೇರುವ ಸಾಧ್ಯತೆ ಇದೆ.
ಇತ್ತೀಚೆಗೆ ಕಾಡಜ್ಜಿ ಕೆರೆಯ ಅಂಗಳದಲ್ಲಿ ನಡೆಯುತ್ತಿದ್ದ ಮಣ್ಣು ಗಣಿಗಾರಿಕೆಯನ್ನು ತಡೆಯಲು ಶಾಸಕ ಬಿ.ಪಿ. ಹರೀಶ್ ಸ್ಥಳಕ್ಕೆ ಹೋಗಿದ್ದರು. ಇಲ್ಲಿಯ ಮಣ್ಣು ಯಾವುದೇ ಅನುಮತಿ ಇಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಒಡೆತನಕ್ಕೆ ಜಮೀನಿಗೆ ಸಾಗಿಸಲಾಗುತ್ತಿದೆ ಎಂದು ಶಾಸಕ ಬಿ.ಪಿ. ಹರೀಶ್ ಆರೋಪಿಸಿದ್ದರು.
ಅಗ ಸ್ಥಳದಲ್ಲಿದ್ದ ಕೆಲವರ ನಡುವೆ ವಾಗ್ವಾದ ನಡೆದಿತ್ತು. ಈ ಪ್ರಕರಣ ನಡೆದು ಎರಡು ದಿನ ಬಳಿಕ ಶಾಸಕರ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮದ ಎಚ್. ಕಾಂತರಾಜ್ ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಬಿ.ಪಿ. ಹರೀಶ್ ಪರವಾಗಿ ಸಿದ್ದೇಶ್ವರ ನೇತೃತ್ವದಲ್ಲಿ ಕರೆದ ಸಭೆಗೆ 100ಕ್ಕೂ ಹೆಚ್ಚು ಬಿಜೆಪಿ ನಾಯಕರು ಸೇರಿದ್ದರು. ಈ ಸಭೆಗೆ ಹಾಜರಾದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ನೇತೃತ್ವದ ನಿಯೋಗ ಪಕ್ಷದ ಕಚೇರಿಯಲ್ಲಿ ಸಭೆ ಸೇರಿಸಲು ಮನವಿ ಮಾಡಿದೆ. ಇದಕ್ಕೆ ಸಿದ್ದೇಶ್ವರ ಬಣ ಒಪ್ಪಿಕೊಂಡಿದೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.
ಮಾಜಿ ಶಾಸಕ ಎಚ್.ಪಿ. ರಾಜೇಶ್, ಬಿಜೆಪಿ ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಯಶವಂತರಾವ್ ಜಾಧವ್, ಜಗದೀಶ್, ಹನಗವಾಡಿ ವೀರೇಶ್ ಹಾಜರಿದ್ದರು.



