ದಾವಣಗೆರೆ: ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಅಪರಾಧ ಪ್ರಕರಣ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ವಾನ ದಳದ ತುಂಗಾ (13) ಎಂಬ ಶ್ವಾನವು ಅನಾರೋಗ್ಯದಿಂದ ಇಂದು ಮೃತಪಟ್ಟಿತು. ಪೊಲೀಸರಿಗೆ ಸವಾಲಾಗಿದ್ದ ಅನೇಕ ಪ್ರಕರಣಗಳನ್ನು ತುಂಗಾ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. 71 ಕೊಲೆ ಹಾಗೂ 35ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳನ್ನು ಭೇದಿಸಿ, 650ಕ್ಕೂ ಹೆಚ್ಚು ಕೇಸ್‌ಗಳಲ್ಲಿ ತನ್ನ ಚಾಣಾಕ್ಷತನ ತೋರಿಸಿತ್ತು.
ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ವಾನ ತುಂಗಾ, ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ನಿಧನವಾಗಿದೆ. 13 ವರ್ಷದ ಪೊಲೀಸ್ ಶ್ವಾನ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. ಸೂಕ್ಷ್ಮ ಪತ್ತೆದಾರಿ ಬುದ್ದಿಯ ಶ್ವಾನ ತುಂಗಾ ಇಬ್ಬರಿಗೆ ಗಲ್ಲು ಹಾಗೂ ನಾಲ್ವರಿಗೆ ಜೀವಾವಧಿ ಶಿಕ್ಷೆ ಕೊಡಿಸಿತ್ತು.
ಅಗಲಿದ ಪೊಲೀಸ್ ಶ್ವಾನ ತುಂಗಾಗೆ ಪೊಲೀಸ್ ಕವಾಯತು ಮೈದಾನದಲ್ಲಿ 3 ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವದೊಂದಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ನೇತೃತ್ವದಲ್ಲಿ ಗೌರವ ವಂದನೆ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಹೆಚ್ಚುವರಿ ಎಸ್ಪಿ ಬಸರಗಿ ಸೇರಿ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡರು. ಶ್ವಾನದ ಹ್ಯಾಂಡ್ಲರ್ ಶಫಿ ಉಲ್ಲಾ ಕಣ್ಣೀರು ಹಾಕಿದರು. ನೆರೆದಿದ್ದವರು ‘ತುಂಗಾ ಅಮರ್ ರಹೇ’ ಎಂದು ಭಾವುಕ ವಿದಾಯ ಹೇಳಿದರು.
ನಾಲ್ಕು ದಿನಗಳಿಂದ ಊಟ ಬಿಟ್ಟಿದ್ದ ತುಂಗಾ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆಯಿತು. ಹೊನ್ನಾಳಿ ಅತ್ಯಾಚಾರ ಹಾಗೂ ಕೊಲೆಯ ಆರೋಪಿಯನ್ನು ಪತ್ತೆ ಮಾಡಿದ್ದು ಅದರ ಕೊನೆಯ ಪ್ರಕರಣವಾಗಿತ್ತು. ಸೂಳೆಕೆರೆ ಗುಡ್ಡದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ 12 ಕಿ.ಮೀ. ಓಡಿ ಕೊಲೆ ಆರೋಪಿಯ ಜಾಡು ಪತ್ತೆ ಹಚ್ಚಿತ್ತು.
ಅಮೆರಿಕನ್ ಮೂಲದ ಡಾಬರ್‌ಮನ್ ಪಿಂಚರ್ ತಳಿಯ ಈ ಶ್ವಾನವು ಬೆಂಗಳೂರಿನ ಆಡಗೋಡಿಯಲ್ಲಿರುವ ರಾಜ್ಯ ಪೊಲೀಸ್ ಶ್ವಾನ ತರಬೇತಿ ಕೇಂದ್ರದಿಂದ 2011 ರಲ್ಲಿ ದಾವಣಗೆರೆಗೆ ಬಂದಿತ್ತು.ಆ. 15ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಕಡೆಯದಾಗಿ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ವಾಸನೆಯನ್ನು ಸೂಕ್ಷ್ಮವಾಗಿ ಗ್ರಹಿಸುವುದು ಈ ಶ್ವಾನದ ವಿಶೇಷತೆಯಾಗಿತ್ತು.



