ದಾವಣಗೆರೆ: ತಾಲ್ಲೂಕಿನ ಮಾಯಕೊಂಡ ವ್ಯಾಪ್ತಿಯ ಗುಜ್ಜಿಕೊಂಡ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ಕ್ವಾರಿ ಮೇಲೆ ಪೊಲೀಸರು ದಾಳಿ ಮಾಡಿದ್ದು, ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಕುರ್ಕಿ ಕ್ಯಾಂಪ್ ನಿವಾಸಿ ಕಾರ್ತಿಕ್ (22) ಎಂಬಾತನನ್ನು ಬಂಧಿಸಿದ್ದು, ಕ್ವಾರಿ ಮಾಲೀಕ ಬಾಡ ಗ್ರಾಮದ ದಿನೇಶ್, ಕ್ವಾರಿ ನಡೆಸುತ್ತಿದ್ದ ಕಬ್ಬೂರು ಗ್ರಾಮದ ತಂಗವೇಲು ವಿರುದ್ಧ ಮಾಯಕೊಂಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ ನೇತೃತ್ವದಲ್ಲಿ ದಾಳಿ ನಡೆದಿದೆ.
ದಾಳಿ ಸಂದರ್ಭದಲ್ಲಿ ಒಂದು ಎಲೆಕ್ಟ್ರಿಕ್ ಡಿಟೋನೇಟರ್, ಒಂದೂವರೆ ಕೆ.ಜಿ ತೂಕದ ಎಕ್ಸ್‌ಪ್ಲೋಸಿವ್ ಬೂಸ್ಟರ್ ವಸ್ತುಗಳು, 14 ಸಾದಾ ಕೇಪು, 4 ಕೆ.ಜಿ ಬ್ಲಾಸ್ಟಿಂಗ್ ಉಪ್ಪು, 10 ಐಡಿಯಲ್ ಪವರ್–90 ಜೆಲ್ ಟ್ಯೂಬ್‌ಗಳು, 60 ಅಡಿ ಉದ್ದದ ಹಸಿರು ಬಣ್ಣದ ಸಾದಾ ಬತ್ತಿ, ಒಂದೂವರೆ ಕೆ.ಜಿ. ಮದ್ದು (ಮಸಿ), ಡಿ.ಗಾರ್ಡ್ ಕೇಬಲ್, 150 ಗ್ರಾಂ ಕಲೆಕ್ಷನ್ ವೈರ್, ಎರಡು ಮೆಗ್ಗರ್ ಮಷಿನ್, ಕೇಪ್ ಚೆಕ್ ಮಾಡುವ ಮೀಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು 16 ಕಲ್ಲು ಹೊಡೆಯುವ ಸುತ್ತಿಗೆಗಳು, 25 ಉಳಿ, 9 ಕಂಪ್ರೆಸರ್ ರಾಡು, ಎರಡು ಕಬ್ಬಿಣದ ಹ್ಯಾಮರ್, ಒಂದು ಟ್ರ್ಯಾಕ್ಟರ್, ಶ್ರೀರಾಮಾಂಜನೇಯ ಸ್ಟೋನ್ ಇಂಡಸ್ಟ್ರೀಸ್ ಹೆಸರಿಗೆ ಸೇರಿದ ಒಂದು ಬಿಲ್ ಪುಸ್ತಕ ಸೇರಿ 1,15,934 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಎಸ್‌ಐ ಅಶ್ವಿನ್‌ಕುಮಾರ್, ಸಿಬ್ಬಂದಿ ಜಿ.ಎಲ್.ಮಂಜುನಾಥ, ಅರುಣಕುಮಾರ ಕುರುಬರ, ಚಾಲಕರಾದ ಹನುಮಂತಪ್ಪ ದಾಳಿಯಲ್ಲಿ ಭಾಗಿಯಾಗಿದ್ದರು.