ದಾವಣಗೆರೆ: ವಂಚನೆ ಪ್ರಕರಣವೊಂದರಲ್ಲಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇರೆಗೆ ನಾಲ್ವರು ಪೊಲೀಸರನ್ನು ಎಸ್ಪಿ ಉಮಾ ಪ್ರಶಾಂತ್ ಅಮಾನತು ಮಾಡಿದ್ದಾರೆ.
ಸಂತೇಬೆನ್ನೂರು ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೆಬಲ್ ಧರ್ಮಪ್ಪ, ಕಾನ್‌ಸ್ಟೆಬಲ್ ಕೊಟ್ರೇಶ್, ಹೊನ್ನಾಳಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ದೊಡ್ಡಬಸಪ್ಪ ಹಾಗೂ ಕಾನ್‌ಸ್ಟೆಬಲ್ ರಾಮಚಂದ್ರಪ್ಪ ಜಿ.ಕೆ. ಅವರನ್ನು ವಾರದ ಹಿಂದೆ ಅಮಾನತು ಮಾಡಲಾಗಿದೆ.
ನ್ಯಾಮತಿ ತಾಲೂಕಿನ ದಾನಿಹಳ್ಳಿ ಗ್ರಾಮದಲ್ಲಿನ ಕೊರಚರ ಕಾಲೊನಿಯ ರೂಪಾ ಎಂಬುವರ ಮನೆಗೆ ಈ ನಾಲ್ವರು ಪೊಲೀಸರು ಸರ್ಚ್ ವಾರೆಂಟ್ ಇಲ್ಲದೇ ಮನೆಗೆ ನುಗ್ಗಿ ಹಣ ಕೇಳಿದ್ದರು. ಆಗ ರೂಪಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಈ ದೂರಿನ್ವಯ ತನಿಖೆ ನಡೆಸಿದ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಎಸ್ಪಿ ಅವರಿಗೆ ವರದಿ ನೀಡಿದ್ದರು. ವರದಿಯನ್ನು ಆಧರಿಸಿ ಉಮಾ ಪ್ರಶಾಂತ್ ನಾಲ್ವರನ್ನು ಅಮಾನತು ಮಾಡಿದ್ದಾರೆ.



