ದಾವಣಗೆರೆ: ಆನ್ ಲೈನ್ ಗೇಮ್ ನಲ್ಲಿ ಹಣ ಸೋತು, ಮನೆಯಲ್ಲಿ ಬೈಯುತ್ತಾರೆಂದು ನನ್ನನ್ನು ಯಾರೋ ಮೂವರು ಅಪಹರಿಸಿ ಹಣ ದೋಚಿದ್ದಾರೆ ಎಂದು ದೂರು ಕೊಟ್ಟವನೇ ಈಗ ಪೊಲೀಸ್ ಅತಿಥಿಯಾಗಿದ್ದಾನೆ.
ಜ.30 ರಂದು ಎಸ್.ಎಸ್.ಎಂ ನಗರದ ಅಮೀರ್ ಖಾನ್( 21) ಆಜಾದ್ ನಗರ ಠಾಣೆಗೆ ಬಂದು ಯಾರೋ 03 ಜನರು ನನಗೆ ಚಾಕು ತೋರಿಸಿ, ನನ್ನನ್ನು ಅಪಹರಿಸಿ, ನನ್ನ ಮೊಬೈಲ್‌ನ್ನು ಕಸಿದುಕೊಂಡು, ನನ್ನ ಮೊಬೈಲ್ ಫೋನ್ ಪೇ ಮುಖಾಂತರ 35,000 /- ರೂ. ಹಣವನ್ನು ಅವರ ಖಾತೆಗೆ ಕಳುಹಿಸಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಇಳಿದ ಪೊಲೀಸರಿಗೆ ದೂರು ಕೊಟ್ಟವನೇ ಅಪರಾಧಿ ಎಂದು ಗೊತ್ತಾಗಿದೆ. ತನ್ನ ಖಾತೆಯಲ್ಲಿದ್ದ ಹಣವನ್ನು ಮೊಬೈಲ್ ಆನ್ ಲೈನ್ ಗೇಮ್ ಗೆ ಹಾಕಿ, ಹಣ ಸೋತು, ಮನೆಯಲ್ಲಿ ಹೇಳಿದ್ರೆ ತಂದೆ ಬೈಯುತ್ತಾರೆಂದು ಆಜಾದ್ ನಗರ ಪೊಲೀಸ್ ಠಾಣೆಗೆ ಬಂದು ಸುಳ್ಳು ದೂರು ಕೊಟ್ಟಿರುವುದು ತನಿಖೆಯಿಂದ ದೃಢಪಟ್ಟಿದೆ. ಪೊಲೀಸ್ ಠಾಣೆಗೆ ಬಂದು ಸುಳ್ಳು ದೂರು ನೀಡಿ, ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡ ದೂರುದಾರ ವಿರುದ್ಧ ಐಪಿಸಿ 182 ಅಡಿ ನ್ಯಾಯಾಲಯಕ್ಕೆ ದೂರು ನೀಡಿದ್ದು, ಸುಳ್ಳು ದೂರು ನೀಡಿದ್ದ ಆರೋಪಿ ಅಮೀರ್ ಖಾನ್‌ಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಪೊಲೀಸ್ ಉಪಾಧೀಕ್ಷ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್, ಠಾಣೆಯ ಸಿಬ್ಬಂದಿಯವರ ಸಹಾಯದಿಂದ ತನಿಖೆ ಕೈಗೊಳ್ಳಲಾಗಿತ್ತು.



