ದಾವಣಗೆರೆ: ನಗರದಲ್ಲಿ ಹೊಸ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ. ಕುಂದವಾಡ ಸಮೀಪ 150 ಎಕರೆ ಜಾಗ ಪರಿಶೀಲಿಸಿದ್ದು, ರೈತರೇ ಪಹಣಿಯೊಂದಿಗೆ ಬಂದು ಜಮೀನು ನೀಡಬಹುದು. ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದು ದೂಢಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.
ಉದ್ಯಾನಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು:ಜೆ.ಎಚ್. ಪಟೇಲ್ ಬಡಾವಣೆಯ ಆರು ಉದ್ಯಾನಗಳಿಗೆ ಸ್ವಾತಂತ್ರ್ಯ ಹೋರಾಟಗಾರರದ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪ ಹುತಾತ್ಮರಾಗಿದ್ದರು. ಅವರ ಹೆಸರನ್ನು ನಾಮಕರಣ ಮಾಡಲು ದೂಢಾ ನಿರ್ಧರಿಸಿದೆ ಎಂದು ರಾಜನಹಳ್ಳಿ ಶಿವಕುಮಾರ್ ಹೇಳಿದರು.
ಇನ್ನು ಧೂಡಾ ಸಭಾಂಗಣಕ್ಕೆ ಮಾಜಿ ಸಂಸದ ದಿ.ಜಿ. ಮಲ್ಲಿಕಾರ್ಜುನಪ್ಪ ಹೆಸರು, ಎಸ್.ನಿಜಲಿಂಗಪ್ಪ ಬಡಾವಣೆಯ ಪ್ರಾಧಿಕಾರದ ಜಾಗಕ್ಕೆ ‘ಅಮರ್ ಜವಾನ್’ ಉದ್ಯಾನ ಎಂದು ನಾಮಕರಣ ಮಾಡಲಾಗಿದೆ. ಹುತಾತ್ಮ ಸೈನಿಕರ ಸ್ಮಾರಕ ನಿರ್ಮಾಣಕ್ಕೆ 75 ಲಕ್ಷ ಬಿಡುಗಡೆ ಮಾಡಲಾಗಿದೆ. ನ.17ರ ದೂಢಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಗಸನಕಟ್ಟೆ ಕೆರೆ ಒತ್ತುವರಿ ಸರ್ವೆ ನಡೆಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಎಲ್ಲ ಪಾರ್ಕ್‌ಗಳ ಸರ್ವೆಗೆ ಆದೇಶಿಸಿದ್ದೇನೆ. ಉದ್ಯಾನದ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಬೃಹತ್ ಕಟ್ಟಡ ನಿರ್ಮಿಸಿದ್ದು, ಅವರಿಗೆ ನೋಟಿಸ್ ನೀಡಲಾಗಿದೆ. 20 ಕೋಟಿ ವೆಚ್ಚದಲ್ಲಿ ಬಾತಿ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ವಾಕಿಂಗ್ ಪಾತ್, ಆಲಂಕಾರಿಕ ದೀಪಗಳು, ಬೋಟಿಂಗ್ ವ್ಯವಸ್ಥೆ, ತೇಲುವ ಹೋಟೆಲ್, 40 ಎಕರೆ ಜಮೀನಿನಲ್ಲಿ ವಾಟರ್ ಪಾರ್ಕ್ ನಿರ್ಮಿಸಿ ಉತ್ತಮ ಮನರಂಜನಾ ತಾಣವಾಗಿ ಅಭಿವೃದ್ಧಿ ಮಾಡಲಾಗುವುದು. ಸರ್ಕಾರದಿಂದ ಅನುಮೋದನೆ ಪಡೆಯಲಾಗುತ್ತಿದೆ. ಟಿವಿ ಸ್ಟೇಷನ್ ಕೆರೆಗೆ 2.75 ಕೋಟಿ, ನಾಗನೂರು ಕೆರೆಗೆ 44 ಲಕ್ಷ, ಹೊನ್ನೂರು ಕೆರೆಗೆ 35 ಲಕ್ಷ ನೀಡಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.



