Connect with us

Dvgsuddi Kannada | online news portal | Kannada news online

ದಾವಣಗೆರೆ: 120 ಕೋಟಿ ವೆಚ್ಚದ ಹೈಟೆಕ್ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಡಿಸಿಎಂ ಲಕ್ಷ್ಮಣ ಸವದಿ

ಪ್ರಮುಖ ಸುದ್ದಿ

ದಾವಣಗೆರೆ: 120 ಕೋಟಿ ವೆಚ್ಚದ ಹೈಟೆಕ್ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಡಿಸಿಎಂ ಲಕ್ಷ್ಮಣ ಸವದಿ

ದಾವಣಗೆರೆ: 120 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಭೂಮಿ ಪೂಜೆ ನೆರವೇರಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಕ.ರಾ.ರ.ಸಾ ನಿಗಮದ ನಗರದ ಬಸ್ ನಿಲ್ದಾಣದ ಪುನರ್ ನಿರ್ಮಾಣಕ್ಕೆ  ಭೂಮಿ ಪೂಜೆ  ಹಾಗೂ ನೂತನ ತಾತ್ಕಾಲಿಕ ಬಸ್ ನಿಲ್ದಾಣ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ  ಸಿಚಿವರು,   ಈ ಕಾರ್ಯಕ್ರಮಕ್ಕೆ ಕಾರಣಕರ್ತರು ಸಂಸದ ಜಿ.ಎಂ.ಸಿದ್ದೇಶ್ವರ ಅವರು.  ಮೈಸೂರಿಗೆ ಲಭಿಸಬೇಕಿದ್ದ ಸ್ಮಾರ್ಟ್‍ಸಿಟಿ ಯೋಜನೆಯನ್ನು ಕೇಂದ್ರದ ಮೇಲೆ ಒತ್ತಡ ತಂದು ದಾವಣಗೆರೆಗೆ ಲಭಿಸುವಂತೆ ಮಾಡಿದರು. ಇದೀಗ ಸ್ಮಾರ್ಟ್‍ಸಿಟಿಯಿಂದ ರೂ.90 ಕೋಟಿ ಮತ್ತು ಇಲಾಖೆಯಿಂದ 30 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣವಾಗುತ್ತಿರುವುದಕ್ಕೆ ನಾನು ಸಂಸದರನ್ನು ಅಭಿನಂದಿಸುತ್ತೇನೆ ಎಂದರು.

  • ನೂತನ ಬಸ್  ನಿಲ್ದಾಣದ ವಿಶೇಷತೆ  ಏನು
  • 120 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ
  • 90 ಕೋಟಿ ಸ್ಮಾರ್ಟ್ ಸಿಟಿ ಹಾಗೂ  30 ಕೋಟಿ ಕೆಎಸ್ ಆರ್ ಟಿಸಿ
  • 9 ಎಕರೆ ವಿಸ್ತಿರ್ಣದಲ್ಲಿ ಹೈಟೆಕ್ ಬಸ್ ನಿಲ್ದಾಣ
  • ನೆಲ ಮಹಡಿ ಸೇರಿ 6 ಮಹಡಿ
  • ವ್ಯವಸ್ಥಿತ ಪಾರ್ಕಿಂಗ್, ಶಾಪಿಂಗ್ ಕಾಂಪ್ಲೆಕ್ಸ್, ಸಿನೆಮಾ ಥಿಯೇಟರ್ , ಟಿಕೆಟ್ ಬುಕಿಂಗ್, ಮಹಿಳಾ ವಿಶ್ರಾಂತಿ ಕೊಠಡಿಗಳು, ಶೌಚಾಲಗಳು, ಭದ್ರತಾ ಕೊಠಡಿ, ಸೋಲಾರ್ ಸೌಲಭ್ಯ, ವಾಹನಗಳ ಪಾರ್ಕಿಂಗ್, ಎಲಿವೇಟರ್‍ಗಳು, ಎಸ್ಕಲೇಟರ್‍ಗಳು, ವೈದ್ಯಕೀಯ ವ್ಯವಸ್ಥೆ

ಲೋಕಸಭಾ ಕ್ಷೇತ್ರದ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಜೋರು ಮಳೆ ಬಂದರೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನೀರು ತುಂಬಿ ಅವ್ಯವಸ್ಥೆ ಆಗುತ್ತಿತ್ತು. ಈಗ ಸ್ಮಾರ್ಟ್ ಸಿಟಿ ಯೋಜನೆಯ ರೂ.90 ಕೋಟಿ ಹಾಗೂ ಸಾರಿಗೆ ಇಲಾಖೆಯ ರೂ.30 ಕೋಟಿ ಒಟ್ಟು ರೂ.120 ಕೋಟಿ ಮೊತ್ತದಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಬಸ್ ನಿಲ್ದಾಣದಲ್ಲಿ ವ್ಯವಸ್ಥಿತ ಪಾರ್ಕಿಂಗ್, ಶಾಪಿಂಗ್ ಕಾಂಪ್ಲೆಕ್ಸ್, ಸಿನೆಮಾ ಥಿಯೇಟರ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳು ಇರಲಿವೆ. 2 ವರ್ಷಗಳ ಅವಧಿಯಲ್ಲಿ ಗುತ್ತಿಗೆದಾರರು ಅಚ್ಚುಕಟ್ಟಾಗಿ, ಶಾಶ್ವತವಾಗಿ ಉಳಿಯುವಂತೆ ಉತ್ತಮ ಗುಣಮಟ್ಟದೊಂದಿಗೆ ನಿರ್ಮಿಸಿಕೊಡಬೇಕು ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಅನೇಕ ಕೆಲಸಗಳು ನಡೆಯುತ್ತಿವೆ. ಹೈಟೆಕ್ ರೈಲ್ವೇ ನಿಲ್ದಾಣ, ರೂ.35 ಕೋಟಿ ವೆಚ್ಚದಲ್ಲಿ ಸಿಆರ್‍ಸಿ, ಉತ್ತಮ ರಸ್ತೆಗಳು, ಬೀದಿ ದೀಪ ವ್ಯವಸ್ಥೆ ಮಾಡಲಾಗಿದೆ. ಹಾಗೂ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲು ಸಾಫ್ಟ್‍ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಜೊತೆಗೆ ರೂ.5 ಕೋಟಿ ವೆಚ್ಚದಲ್ಲಿ ಎಸಿ ಕಚೇರಿ ನಿರ್ಮಿಸಲು ಒಪ್ಪಿಗೆ ದೊರೆತಿದೆ ಎಂದರು.

ದಾವಣಗೆರೆಯನ್ನು ಅತ್ಯುತ್ತಮ ಜಿಲ್ಲೆಯನ್ನಾಗಿಸುವುದು ನನ್ನ ಕನಸಾಗಿದ್ದು ಇದನ್ನು ಸಾಕಾರಗೊಳಿಸಲು ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳು ಸಹಕರಿಸುತ್ತಿದ್ದು, ಮುಂದೆಯೂ ಹೀಗೆಯೇ ಕೈಹಿಡಿಯುತ್ತಾರೆಂಬ ಭರವಸೆ ಇದೆ ಎಂದು ತಿಳಿಸಿದರು.

ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಇಂದು ಚಾಲನೆ ನೀಡಿದ್ದು ಅಲ್ಲಿ ನಿರಪಯುಕ್ತ ಬಸ್‍ನಲ್ಲಿ ಮಹಿಳೆಯರಿಗೆ ಮೊಬೈಲ್ ಶೌಚಾಲಯ ನಿರ್ಮಿಸಿರುವುದು ಅತ್ಯುತ್ತಮವಾಗಿದ್ದು ಈ ಕೆಲಸ ಶ್ಲಾಘನೀಯವಾಗಿದೆ ಎಂದ ಅವರು ಉತ್ತಮ ಸೇವೆಗಾಗಿ ಬೆಳ್ಳಿ ಪದಕ ಪಡೆದವರ ಜವಾಬ್ದಾರಿ ಇನ್ನೂ ಹೆಚ್ಚಿದ್ದು, ಎಲ್ಲರೂ ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸಬೇಕೆಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಿ ಮಾತನಾಡಿ, ಇಂದು ಸಂತೋಷದ ದಿನವಾಗಿದ್ದು, ಇಡೀ ರಾಜ್ಯದಲ್ಲೇ ದಾವಣಗೆರೆಯ ಬಸ್ ನಿಲ್ದಾಣ ಮಾದರಿ ಆಗಬೇಕು. ಆ ರೀತಿಯಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶ್ರದ್ದೆಯಿಂದ ನಿಗದಿತ ಸಮಯದೊಳಗೆ ಕೆಲಸ ಮಾಡಬೇಕೆಂದು ಸೂಚಿಸಿದ ಅವರು ಸಂಸದರ ಪ್ರಯತ್ನದಿಂದ ಸ್ಮಾರ್ಟ್‍ಸಿಟಿ ಯೋಜನೆಯಡಿ ಅತ್ಯಾಧುನಿಕ ಬಸ್ ನಿಲ್ದಾಣ ಕಾರ್ಯ ಆರಂಭವಾಗಿದ್ದು, ಅವರು ಪ್ರತಿ ತಾಲ್ಲೂಕುಗಳ ಬಗ್ಗೆ ಗಮನ ಹರಿಸಿ ಮಾಡಿಸುತ್ತಿದ್ದಾರೆ ಎಂದರು.

ಬಸ್ ಚಾಲಕರ ಕೈಯಲ್ಲಿ ಎಲ್ಲ ಪ್ರಯಾಣಿಕರ ಪ್ರಾಣ ಇರುತ್ತದೆ. ಆದ ಕಾರಣ ನಿರ್ಲಕ್ಷ್ಯ ವಹಿಸದೇ, ಜಾಗ್ರತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದ ಅವರು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದಲ್ಲಿ ಸಂಸ್ಥೆಯನ್ನು ಅಭಿವೃದ್ದಿಯತ್ತ ಕೊಂಡಯ್ಯಲು ಸಾಧ್ಯ ಎಂದರು

ಕ.ರಾ.ರ.ಸಾ ನಿಗಮದ ಅಧ್ಯಕ್ಷ ಚಂದ್ರಪ್ಪ ಮಾತನಾಡಿ,  ಸಂಸ್ಥೆಯಲ್ಲಿ ಡೀಸೆಲ್‍ಗೂ ಹಣ ಇಲ್ಲದಂತಹ ಕಷ್ಟ ಕಾಲದಲ್ಲಿ, ಬಸ್‍ಗಳು ಓಡಾಡಲು ಕಷ್ಟಕರವಾಗಿದ್ದ ಸಂದರ್ಭದಲ್ಲಿ ಸಾರಿಗೆ ಸಚಿವರು ಸರ್ಕಾರದ ಮನವೊಲಿಸಿ 1780 ಕೋಟಿ ಅನುದಾನವನ್ನು ತಂದರು. ಆದರೆ ಕಳೆದ ಮಾಹೆಯ 11 ಮತ್ತು 12 ನೇ ತಾರೀಕಿನಂದು ಇಲಾಖೆಯ ನೌಕರರು ಏಕಾಏಕಿ ಪ್ರತಿಭಟನೆ ಆರಂಭಿಸಿದಿರಿ. ಸುಮಾರು 1.30 ಲಕ್ಷ ನೌಕರರಿರುವ ಒಂದು ತಿಂಗಳಿಗೆ ವೇತನ ನೀಡಲು ಸುಮಾರು 300 ಕೋಟಿ ಅವಶ್ಯಕತೆ ಇರುವ ಸಂಸ್ಥೆಯ ಕಷ್ಟಗಳೆಲ್ಲ ತಿಳಿದಿದ್ದ ನೀವು ಸರ್ಕಾರಕ್ಕೆ ಬೆಲೆ ಕೊಡುವ ಕೆಲಸ ಮಾಡಬೇಕಿತ್ತು ಎಂದರು.

ಇಲಾಖೆ ನಷ್ಟದಲ್ಲಿದ್ದರೂ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಒಂದೇ ಕಾರಣಕ್ಕೆ ಬಸ್‍ಗಳನ್ನು ಓಡಿಸುತ್ತಿದ್ದೇವೆ. 30 ಸಾವಿರ ಬಸ್ ಗಳ ಪೈಕಿ 20 ಸಾವಿರ ಬಸ್‍ಗಳನ್ನು ಓಡಿಸುತ್ತಿದ್ದು 10 ಸಾವಿರ ಬಸ್‍ಗಳು ಗ್ಯಾರೇಜ್‍ನಲ್ಲಿ ನಿಂತಿವೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಪ್ರತಿಭಟನೆ ನಡೆಸಿದಿರಿ. ಮುಂದಿನ ದಿನಗಳಲ್ಲಿ ಹೀಗೆ ಮಾಡಿದರೆ ಸಂಸ್ಥೆಯನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುಬಹುದೆಂದು ಸೂಚ್ಯವಾಗಿ ಹೇಳುತ್ತಿದ್ದೇನೆ ಎಂದ ಅವರು ನೌಕರರೆಲ್ಲರೂ ಇದು ನಮಗೋಸ್ಕರ ಇರುವ ಸಂಸ್ಥೆ ಎಂಬ ಮನೋಭಾವ ಹೊಂದಬೇಕೆಂದರು

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರದಲ್ಲಿ ಹೈಟೆಕ್ ಬಸ್‍ನಿಲ್ದಾಣವಾಗುತ್ತಿರುವುದು ಸಂತಸದ ವಿಚಾರ. ಆದರೆ ಬಸ್‍ಸ್ಟ್ಯಾಂಡ್ ಕೆಡವಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಕ್ಷಿಪ್ರವಾಗಿ ಕೆಲಸ ಮುಗಿಸಬೇಕೆಂದರು.

ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾತನಾಡಿ, ಒಟ್ಟು 9 ಎಕರೆ ಜಾಗದಲ್ಲಿ ಸ್ಮಾರ್ಟ್‍ಸಿಟಿಯ ರೂ.90 ಕೋಟಿ ಮತ್ತು ಸಾರಿಗೆ ಇಲಾಖೆಯ ರೂ.30 ಕೋಟಿ ಸೇರಿ ಒಟ್ಟು ರೂ.120 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನೀಲಿನಕ್ಷೆ ತಯಾರಿಸಲಾಗಿದೆ. ನೆಲಮಹಡಿ ಸೇರಿ ಒಟ್ಟು ಆರು ಮಹಡಿಗಳಲ್ಲಿ ನಿಲ್ದಾಣದ ನಿರ್ಮಾಣ ಆಗಲಿದೆ. ಬಸ್ ನಿಲ್ದಾಣದಲ್ಲಿ ಟಿಕೆಟ್ ಬುಕಿಂಗ್, ಮಹಿಳಾ ವಿಶ್ರಾಂತಿ ಕೊಠಡಿಗಳು, ಶೌಚಾಲಗಳು, ಭದ್ರತಾ ಕೊಠಡಿ, ಸೋಲಾರ್ ಸೌಲಭ್ಯ, ವಾಹನಗಳ ಪಾರ್ಕಿಂಗ್, ಎಲಿವೇಟರ್‍ಗಳು, ಎಸ್ಕಲೇಟರ್‍ಗಳು, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಸೌಲಭ್ಯ ಸಹ ಮಾಡಲಾಗುವುದು ಎಂದರು.

ಬೆಳ್ಳಿ ಪದಕ ಪ್ರದಾನ :ದಾವಣಗೆರೆ ವಿಭಾಗದಲ್ಲಿ 2018 ಮತ್ತು 2019 ನೇ ಸಾಲಿನಲ್ಲಿ ಸತತವಾಗಿ 5 ವರ್ಷ ಅಪಘಾತ/ಅಪರಾಧರಹಿತವಾಗಿ ಹಾಗೂ ಪ್ರತಿ ವರ್ಷ ಕನಿಷ್ಟ 200 ದಿನ ಹಾಜರಾತಿ ಹೊಂದಿ ಸೇವೆ ಸಲ್ಲಿಸಿದ ಒಟ್ಟು 27 ಚಾಲಕರು ಮತ್ತು ಚಾಲಕ/ನಿರ್ವಾಹಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.

ಮಾಯಕೊಂಡ ಕ್ಷೇತ್ರದ ಶಾಸಕರಾದ ಪ್ರೊ.ಲಿಂಗಣ್ಣ, ಜಿ.ಪಂ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್, ಸಾರಿಗೆ ಮಂಡಳಿ ನಿರ್ದೇಶಕರುಗಳಾದ ರಾಜು, ಆರುಂಡಿ ನಾಗರಾಜ್, ರುದ್ರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಎಸ್‍ಪಿ ರಾಜೀವ್ ಮುಖ್ಯ ಇಂಜಿನಿಯರ್ ಜಗದೀಶ್ ಚಂದ್ರ ಇತರೆ ಅಧಿಕಾರಿಗಳು ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top