ದಾವಣಗೆರೆ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಹಿಸಿದ ಕಾಮಗಾರಿಗಳನ್ನು ಕೈಗೊಳ್ಳಲು ಇಂಜಿನಿಯರ್‍ಗಳು ವಿಳಂಬ ಮಾಡದೇ ಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿಗಳ ಕುರಿತು ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತವಾಗಿ ಮುಗಿಸಬೇಕೆಂದು ಸಂಸದರಾದ ಡಾ.ಜಿ.ಎಂ ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ(4)ರಂದು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ಜರುಗಿದ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಇಲಾಖೆ ಅಧಿಕಾರಿ, ಇಂಜಿನಿಯರ್‍ಗಳು ನಿಗಧಿತ ಅವಧಿಯೊಳಗೆ ತಮಗೆ ವಹಿಸಿದ ಸರ್ಕಾರಿ ಶಾಲಾ ಕೊಠಡಿ, ವಿದ್ಯುತ್ ಕಂಬ ತೆರವು, ಬಸ್ ತಂಗುದಾಣ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಹಾಲು ಉತ್ಪಾದಕರ ಸಹಕಾರ ಸಂಘ ಕಟ್ಟಡ ನಿರ್ಮಾಣ ಹಾಗೂ ರಸ್ತೆ ಕಾಮಗಾರಿಗಳ ನಿರ್ಮಾಣದ ಪ್ರತಿ ಹಂತವನ್ನು ಪರಿಶೀಲಿಸಿದರು.
ಕಾಮಗಾರಿ ಅನುಷ್ಠಾನಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮಾಹಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಪ್ರಗತಿ ಎಂದು ತಿಳಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಕಾಮಗಾರಿಗೆ ಸಂಬಂಧಿಸಿದಂತೆ ವಾಸ್ತವ, ಪಾರದರ್ಶಕ ವಿವರವನ್ನು ನೀಡುವಂತೆ ಕ್ರಮವಹಿಸಲು ಸೂಚನೆ ನೀಡಿದರು.
2019-20 ರಿಂದ 2022-23ನೇ ಸಾಲಿನವರೆಗೆ ಈ 17 ನೇ ಲೋಕಸಭಾ ಅವಧಿಯಲ್ಲಿ 94 ಕಾಮಗಾರಿಗಳನ್ನು ನೀಡಲಾಗಿದೆ. ರೂ.599.50 ಲಕ್ಷ ಅಂದಾಜು ಮೊತ್ತ ನಿಗದಿಯಾಗಿದ್ದು ಇದರಲ್ಲಿ 76 ಕಾಮಗಾರಿಗಳು ಪ್ರಗತಿಯಲ್ಲಿವೆ. ರೂ.405.50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನೂ ರೂ.194.00 ಲಕ್ಷ ಅನುದಾನ ಬಿಡುಗಡೆ ಮಾಡಬೇಕಾಗಿದೆ ಎಂದರು.
ದಾವಣಗೆರೆ ತಾಲ್ಲೂಕಿನಲ್ಲಿ ರೂ.42.00 ಲಕ್ಷದ 5 ಹರಿಹರ ತಾಲ್ಲೂಕಿನಲ್ಲಿ ಒಟ್ಟು ರೂ.18.00 ಲಕ್ಷ ಅನುದಾನ ನಿಗದಿಯಾಗಿದ್ದು 2 ಮುಂದುವರೆದ ಕಾಮಗಾರಿ, ಚನ್ನಗಿರಿ ತಾಲ್ಲೂಕಿನಲ್ಲಿ ಒಟ್ಟು ರೂ. 16.00 ಲಕ್ಷದ 3 ಮುಂದುವರೆದ ಕಾಮಗಾರಿ ನ್ಯಾಮತಿ ತಾಲ್ಲೂಕಿನಲ್ಲಿ 8.00 ಲಕ್ಷ ಅನುದಾನದಲ್ಲಿ 2 ಮುಂದುವರೆದ ಕಾಮಗಾರಿ, ಜಗಳೂರು ತಾಲ್ಲೂಕಿನಲ್ಲಿ ರೂ. 8.00 ಲಕ್ಷ 2 ಮುಂದುವರೆದ ಕಾಮಗಾರಿ ನಡೆಯುತ್ತಿವೆ.
ಕಳೆದ ಬಾರಿಗಿಂತ ಈ ಬಾರಿ ಮುಂದುವರೆದ ಕಾಮಗಾರಿಗೆ ಕಡಿಮೆ ಅನುದಾನ ಇರಿಸಲಾಗಿದೆ. ಹಾಗೂ ಸಂಬಂಧಿಸಿದ ಅಧಿಕಾರಿಗಳು ಹೆಚ್ಚು ಮುಂದುವರೆದ ಕಾಮಗಾರಿಗಳಾಗದಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು. ಮುಂದುವರೆದ ಎಲ್ಲಾ ಕಾಮಗಾರಿಗಳನ್ನು ಈ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಸದರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾ ವ್ಯವಸ್ಥಾಪಕ ರವಿ ಹಾಗೂ ಕಾಮಗಾರಿ ಅನುಷ್ಟಾನಾಧಿಕಾರಿಗಳು ಮತ್ತು ಇಂಜಿನಿಯರ್‍ಗಳು ಉಪಸ್ಥಿತರಿದ್ದರು.



