ಮಲೇಬೆನ್ನೂರು: ಶಿವಮೊಗ್ಗ–ಹರಿಹರ ರೈಲು ಮಾರ್ಗಕ್ಕೆ ತೋಟದ ಬೆಳೆಗಾರರು ಭೂ ಸ್ವಾಧೀನಕ್ಕೆ ಒಪ್ಪುತ್ತಿಲ್ಲ. ಶಿವಮೊಗ್ಗ ಭಾಗದಲ್ಲಿ ಸರ್ವೆ ಕಾರ್ಯ ನಡೆದಿಲ್ಲ. ದಾವಣಗೆರೆ ಭಾಗದ ಸರ್ವೆ ಕಾರ್ಯ ಮುಗಿದಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಮಲೇಬೆನ್ನೂರು ಹೊರವಲಯದಲ್ಲಿ ರಾಜ್ಯ ಹೆದ್ದಾರಿ–25ರ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈವೇಳೆ ಡಾಂಬರೀಕರಣ ಕಾಮಗಾರಿ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ರಾಜ್ಯ ಹೆದ್ದಾರಿ–25 ಅನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ. 1 ಲಕ್ಷ ಕಿಮಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಲಿದ್ದು, ಕೋವಿಡ್ ಕಾರಣ ಹಣಕಾಸು ಹೊಂದಾಣಿಕೆ ಆಗಿಲ್ಲ. ಹಂತಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಪ್ರಸ್ತುತ ರಸ್ತೆ ದುರಸ್ತಿ ಕೆಲಸಕ್ಕೆ 2 ಕೋಟಿ ಮಂಜೂರಾಗಿದ್ದು, ಡಾಂಬರೀಕರಣ ನಡೆಯಲಿದೆ ಎಂದು ತಿಳಿಸಿದರು.
ಹರಪನಹಳ್ಳಿಯಲ್ಲಿ ಬಿಎಸ್ಎಫ್ ಕೇಂದ್ರ ಸ್ಥಾಪನೆಗೆ, ಹರಿಹರದಲ್ಲಿ ಎಥೆನಾಲ್ ಘಟಕ, ರಸಗೊಬ್ಬರ ಕಾರ್ಖಾನೆ ಸ್ಥಾಪಿಸುವ ಕೆಲಸ ಪ್ರಗತಿಯಲ್ಲಿಎಂದರು.
ಶಾಸಕ ಎಸ್. ರಾಮಪ್ಪ ಮಾತನಾಡಿ, ಈ ಭಾಗದ ಜನಪ್ರತಿನಿಧಿಗಳು ವಿವಿಧ ಅಭಿವೃದ್ಧಿ ಕೆಸಲ ಮಾಡಲು ಸ್ಪಂದಿಸಿದ್ದಾರೆ. ಇನ್ನೂ ಕೆಲವು ಕೆಲಸಗಳಿಗೆ ಮಂಜೂರಾತಿ ಸಿಕ್ಕಿಲ್ಲ ಎಂದರು.
ಮಾಜಿ ಶಾಸಕ ಬಿ.ಪಿ. ಹರೀಶ್, ಪುರಸಭೆ ಅಧ್ಯಕ್ಷೆ ನಾಹಿದಾ ಅಂಜು, ಉಪಾಧ್ಯಕ್ಷೆ ಡಿ.ಕೆ. ಅಂಜಿನಮ್ಮ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಎಇಇ ನಾಗರಾಜಪ್ಪ, ಎಇ ಶಿವಮೂರ್ತಿ, ದಿನಕರ್, ಎಪಿಎಂಸಿ ನಿರ್ದೇಶಕ ಮಂಜುನಾಥ್ ಪಟೇಲ್, ಪುರಸಭೆ ಸದಸ್ಯರಾದ ಆರೀಫ್ ಅಲಿ, ದಾದಾವಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬಿದ್ ಅಲಿ. ಐರಣಿ ಅಣ್ಣೇಶ್, ಜಿಗಳಿ ಹನುಮಗೌಡ, ರಂಗನಾಥ್ ಇದ್ದರು.



