ದಾವಣಗೆರೆ: ಪಿಎಂ ಪೋಷಣ್ ಅಭಿಯಾನದಡಿ ಬಿಸಿಯೂಟ ಅಡುಗೆ ಸಹಾಯಕರ ಗೌರವಧನದ ಸಹಾಯಧನ ಹೆಚ್ಚಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್( davangere mp prabha mallikarjun) ಮನವಿ ಮಾಡಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಯ ಮೂಲಕ ಶಿಕ್ಷಣ ಸಚಿವರ ಗಮನ ಸೆಳೆದಿದ್ದಾರೆ. ಬಿಸಿಯೂಟ ತಯಾರಕರ ಗೌರವಧನದಲ್ಲಿರುವ ತಾರತಮ್ಯ ನಿವಾರಿಸುವಂತೆ ಕೋರಿಕೊಂಡಿದ್ದಾರೆ. ಅಡುಗೆ ಸಹಾಯಕರ ಗೌರವಧನಕ್ಕೆ ಕೇಂದ್ರ ಶೇ 60 ಹಾಗೂ ರಾಜ್ಯ ಶೇ 40ರಷ್ಟು ಗೌರವಧನ ಭರಿಸಬೇಕಾಗಿದೆ.
ಆರಂಭದಲ್ಲಿ ಮಾಸಿಕವಾಗಿ ನೀಡುತ್ತಿದ್ದ ₹ 1000 ಗೌರವಧನದಲ್ಲಿ ಕೇಂದ್ರದ ₹ 600 ಹಾಗೂ ರಾಜ್ಯದ ₹ 400 ಸೇರಿತ್ತು. ಈ ಗೌರವಧನ ಪ್ರಸ್ತುತ ₹ 3000ಕ್ಕೆ ಏರಿಕೆಯಾಗಿದೆ. ಆದರೆ ಕೇಂದ್ರದ ಪಾಲು ₹ 600ಕ್ಕೆ ಸೀಮಿತಗೊಂಡಿದೆ.ಗೌರವಧನಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರ ತನ್ನ ಪಾಲು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.



