ದಾವಣಗೆರೆ: ಇಡೀ ಜಿಲ್ಲೆಗೆ ಉದ್ಯೋಗಖಾತ್ರಿಯಡಿ ಅಡಿಕೆ ಬೆಳೆಗಾರರಿಗೆ ಅನುದಾನ ನೀಡಲು ಅವಕಾಶ ಮಾಡಿಕೊಡಲು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುಮತಿ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ಡಿಸ್ಟ್ರಿಕ್ಟ್ ಡೆವೆಲಪ್‍ಮೆಂಟ್ ಕೋ-ಆರ್ಡಿನೇಷನ್ & ಮಾನಿಟರಿಂಗ್ ಕಮಿಟಿ-ಡಿಡಿಸಿಎಂಸಿ) ‘ದಿಶಾ’ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿಯೂ ಅಡಿಕೆ ಬೆಳೆಗಾರರು ಹೆಚ್ಚಾಗಿದ್ದಾರೆ. ಹೀಗಾಗಿ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಯಲ್ಲಿ ಕನಿಷ್ಟ 1 ಲಕ್ಷ ರೈತರನ್ನು ವಿಮಾ ವ್ಯಾಪ್ತಿಗೆ ಸೇರಿಸಬೇಕು, ಈ ದಿಸೆಯಲ್ಲಿ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉದ್ಯೋಗಖಾತ್ರಿ ಯೋಜನೆಯಡಿ ಕಳೆದ ವರ್ಷ 131.75 ಕೋಟಿ ರೂ. ಗಳ ವೆಚ್ಚದಲ್ಲಿ 33.51 ಲಕ್ಷ ಮಾನವ ದಿನಗಳಿಗೆ ಕೂಲಿಕಾರರಿಗೆ ಉದ್ಯೋಗ ನೀಡಲಾಗಿದೆ. ವಿವಿಧ ತೋಟಗಾರಿಕೆ ಬೆಳೆಗಳಿಗೆ ನರೇಗಾದಡಿ ಕನ್ವರ್ಜೆನ್ಸ್ ಮಾಡಿಕೊಳ್ಳಲು ಅವಕಾಶ ನೀಡಿದಂತೆಯೇ, ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕಿಗೆ ಮಾತ್ರ ಅಡಿಕೆ ಬೆಳೆಗೂ ಅವಕಾಶವನ್ನು ಸರ್ಕಾರ ಕಳೆದವರ್ಷ ನೀಡಿದೆ. ಮಲೆನಾಡು ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಡುವ ತಾಲ್ಲೂಕುಗಳಿಗೆ ಮಾತ್ರ ಅಡಿಕೆ ಬೆಳೆ ಸೇರ್ಪಡೆಗೆ ಅವಕಾಶವಿದೆ ಎಂಬ ಕಾರಣ ನೀಡಿ, ಇಡೀ ಜಿಲ್ಲೆಗೆ ವಿಸ್ತರಣೆ ಮಾಡುವಂತೆ ಕೋರಿದ ಪ್ರಸ್ತಾವನೆ ತಿರಸ್ಕೃತಗೊಂಡಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಆನಂದ್ ತಿಳಿಸಿದರು.