ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ 2 ವಾರ್ಡ್ ಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಘೋಷಣೆಯಾಗಿದ್ದು, ಕಾಂಗ್ರೆಸ್, ಬಿಜೆಪಿ ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ.

ಇಂದು ಬೆಳಗ್ಗೆಯಿಂದ ಮತ ಎಣಿಕೆ ಕಾರ್ಯ ನಗರದ ಡಿಆರ್ ಆರ್ ಕಾಲೇಜ್ ನಲ್ಲಿ ನಡೆದಿದ್ದು, ಎರಡೂ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಪಾಲಿಕೆ ವಾರ್ಡ್ 22 (ಯಲ್ಲಮ್ಮನಗರ) ರಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ವಾರ್ಡ್ 20 (ಭಾರತ್ ಕಾಲೋನಿ) ಕಾಂಗ್ರೆಸ್ ಜಯಗಳಿಸಿದೆ. 20ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಜಗದೀಶ್ ಗೆಲುವು.

20ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಜಗದೀಶ್, ಪ್ರತಿ ಸ್ಪರ್ಧಿ ಬಿಜೆಪಿಯ ರೇಣುಕಾ ಕೃಷ್ಣ ಅವರ ವಿರುದ್ಧ 346 ಮತಗಳ ಅಂತರದ ಗೆಲುವು ಸಾಧಿಸಿದ್ಧಾರೆ. 22ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶಿವಾನಂದ, ಪ್ರತಿಸ್ಪರ್ಧಿ ಕಾಂಗ್ರೆಸ್ ನ ರವಿಸ್ವಾಮಿ ವಿರುದ್ಧ 410 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ.
ಕಾಂಗ್ರೆಸ್ ಸದಸ್ಯರಾಗಿದ್ದ ಯಶೋಧಮ್ಮ ( ವಾರ್ಡ್ 20) ಮತ್ತು ಶಿವಕುಮಾರ್ ದೇವರಮನಿ ( ವಾರ್ಡ್ 22) ರಾಜೀನಾಮೆಯಿಂದ ಚುನಾವಣೆ ಎದುರಾಗಿತ್ತು. ಮಹಾನಗರ ಪಾಲಿಕೆಯ ಒಟ್ಟು 45 ವಾರ್ಡ್ ಗಳಲ್ಲಿ ಉಪ ಚುನಾವಣೆ ಫಲಿತಾಂಶ ಬಳಿಕೆ ಬಿಜೆಪಿ 22 (ನಾಲ್ಕು ಪಕ್ಷೇತರರು ಸೇರಿ) ಕಾಂಗ್ರೆಸ್ 22 (ಒಬ್ಬ ಪಕ್ಷೇತರ ಸೇರಿ), ಜೆಡಿಎಸ್ 1 ಸ್ಥಾನ ಪಡೆದಂತಾಗಿದೆ.



