ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯತಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ದಾಖಲಿಸಿದೆ. ಮೇಯರ್ ಆಗಿ ಬಿಜೆಪಿಯ ಎಸ್.ಟಿ. ವೀರೇಶ್ ಹಾಗೂ ಉಪ ಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ.
ಬಿಜೆಪಿ 29 ಮತಗಳನ್ನು ಪಡೆಯುವ ಮೂಲಕ ದಾವಣಗೆರೆ ಪಾಲಿಕೆ ಅಧಿಕಾರ ಹಿಡಿದಿದೆ. ಕಾಂಗ್ರೆಸ್ 22 ಮತಗಳನ್ನು ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ. ಈ 7 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮೇಯರ್, ಉಪಮೇಯರ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಕಾಂಗ್ರೆಸ್ ಹಿರಿಯ ಮುಖಂಡ ಶಾಸಕ ಶಾಮನೂರು ಶಿವಶಂಕರಪ್ಪ ಗೈರು ಹಾಜರಿಯಲ್ಲಿ ನಡೆದ ಮೇಯರ್ ಉಪಮೇಯರ್ ಮತದಾನ ನಡೆದಿತ್ತು. ದಾವಣಗೆರೆ ಪಾಲಿಕೆ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಎಸ್. ಟಿ. ವೀರೇಶ್, ಕಾಂಗ್ರೆಸ್ ನಿಂದ ಗಡಿಗುಡಾಳ್ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಶಿಲ್ಪ ಜಯಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿಯಿಂದ ಸಚಿವ ಆರ್ ಶಂಕರ್ , ಸಂಸದ ಜಿ ಎಂ ಸಿದ್ದೇಶ್ವರ್ , ಚಿದಾನಂದಗೌಡ ಸೇರಿದಂತೆ ಬಿಜೆಪಿಯ 29 ಸದಸ್ಯರು ಭಾಗಿದ್ದಾರೆ. ಕಾಂಗ್ರೆಸ್ ನ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮೂರು ಎಂ ಎಲ್ ಸಿ ಗಳಾದ ಕೆಸಿ ಕೊಂಡಯ್ಯ, ರಘು ಆಚಾರ್ , ಯುಬಿ ವೆಂಕಟೇಶ್ ಗೈರಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಸೇರಿ ಪಾಲಿಕೆ 22 ಸದಸ್ಯರು ಹಾಜರಾಗಿದ್ದರು. ಶಾಮನೂರು ಶಿವಶಂಕರಪ್ಪ ಆಪ್ತರಾಗಿದ್ದ ಶಿವಕುಮಾರ್ ದೇವರಮನಿ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ನಿನ್ನೆಯಷ್ಟೇ ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಸೇರಿದ್ದರು.
ಇದರೊಂದಿಗೆ ಚುನಾವಣೆಗೆ ಕಾಂಗ್ರೆಸ್ ಸೋಲುವುದು ಪಕ್ಕಾ ಆಗಿತ್ತು. ಇದರ ಮಧ್ಯೆ ಬೆಳಗ್ಗೆ ಕಾಂಗ್ರೆಸ್ ಹಿರಿಯ ಮುಖಂಡರ ಅನುಪಸ್ಥಿತಿಯಲ್ಲಿ ಚುನಾವಣೆ ನೆಡೆದಿದ್ದರಿಂದ ಬಿಜೆಪಿ ಗೆಲುವ ಸುಲಭವಾಯಿತು.



