ದಾವಣಗೆರೆ: ಶಾಮನೂರು ಶಿವಶಂಕರಪ್ಪ ಬಡಾವಣೆ ಹೆಸರು ಬದಲಿಸಲು ಮುಂದಾಗಿದಕ್ಕೆ ಕಾಂಗ್ರೆಸ್ -ಬಿಜೆಪಿ ಸದಸ್ಯರ ನಡೆವೆ ವಾಕ್ಸಮರ ನಡೆಯಿತು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಇಂದು ಬಜೆಟ್ ಸಭೆ ಆರಂಭವಾಗುತ್ತಿದ್ದಂತೆ ಶಾಮನೂರು ಸಮೀಪದ ಶಾಮನೂರು ಶಿವಶಂಕರಪ್ಪ ಬಡಾವಣೆ ಹೆಸರು ಬದಲಿಸಲು ಮುಂದಾಗಿರುವ ವಿಚಾರವಾಗಿ ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಎ. ನಾಗರಾಜ್, ಶಾಮನೂರು ಸಮೀಪದ ಶಾಮನೂರು ಶಿವಶಂಕರಪ್ಪ ಬಡಾವಣೆಯ ನಿವಾಸಿಗಳು ಬಡಾವಣೆಯ ಹೆಸರನ್ನು ಮಲ್ಲಿಕಾರ್ಜುನಪ್ಪ ಬಡಾವಣೆ ಎಂದು ಬದಲಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಬಡಾವಣೆ ಹೆಸರು ಬದಲಾವಣೆ ಮಾಡಬಾರದು ಎಂದರು.
ಇದು ಬಜೆಟ್ ಸಭೆ. ಬಜೆಟ್ ಮಂಡನೆಗೆ ಮೊದಲ ಆದ್ಯತೆ ಎಂದು ಬಿಜೆಪಿ ಸದಸ್ಯರು ಹೇಳಿದರು. ನಾಡಗೀತೆಯಲ್ಲಿರುವ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಾಲನ್ನೇ ಅಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು. ಕೆರಳಿದ ಬಿಜೆಪಿ ಸದಸ್ಯರು ನೀವೇ(ಕಾಂಗ್ರೆಸ್ ) ಅಶಾಂತಿ ಸೃಷ್ಠಿಸುವ ಕಲಸಮಾಡಿದ್ದು ಎಂದು ಕಿಡಿಕಾರಿದರು.
ಕಾಂಗ್ರೆಸ್ ಬಜೆಟ್ ಸಭೆಯಲ್ಲಿ ಪ್ರಚಾರ ಗಿಟ್ಟಿಸಲು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಮಹಿಳೆ ಒಬ್ಬರು ಮೇಯರ್ ಮಾತನಾಡಲಿಕ್ಕೆ ಕಾಂಗ್ರೆಸ್ ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದೊಂದು ಅಪಮಾನ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ನಾವು ಮಹಿಳೆಯರಿಗೆ ಅಪಮಾನ ಮಾಡುತ್ತಿಲ್ಲ. ನೀವೇ ಅಪಮಾನ ಮಾಡುತ್ತಿದ್ದೀರಿ ಎಂದರು.
ಈ ಸಂದರ್ಭದಲ್ಲಿ ಪರಿಷತ್ತು ಕಾರ್ಯದರ್ಶಿ ಬಜೆಟ್ ಸಭೆಗೆ ಮೇಯರ್ ಅವರಿಗೆ ಸ್ವಾಗತ ಕೋರಲು ಮುಂದಾದರು. ಕಾಂಗ್ರೆಸ್ ಸದಸ್ಯರು ಮೇಯರ್ ಉತ್ತರ ನೀಡಿದ ಮೇಲೆ ಸಭೆ ಮುಂದುವರೆಸಬೇಕು ಎಂದು ಘೋಷಣೆ ಕೂಗಿದರು. ಬಜೆಟ್ ಮಂಡನೆ ನಂತರ ಈ ವಿಚಾರ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಮೇಯರ್ ಜಯಮ್ಮ ಗೋಪಿನಾಯ್ಕ ಹೇಳಿದ ನಂತರ ಕಾಂಗ್ರೆಸ್ ಸದಸ್ಯರು ಸುಮ್ಮನೆ ಕುಳಿತುಕೊಂಡರು.