ದಾವಣಗೆರೆ: ಲಂಚ ಸ್ವೀಕಾರ ಪ್ರಕರಣದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಕರ ವಸೂಲಿಗಾರ ಎನ್.ಶಿವಣ್ಣ ಅಮಾನತು ಮಾಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಖಾತೆ ವರ್ಗಾವಣೆಗೆ ಲಂಚ ಪಡೆದ ಆರೋಪದಲ್ಲಿ ಮಹಾನಗರ ಪಾಲಿಕೆ ಕಂದಾಯ ಶಾಖೆಯ ಕರ ವಸೂಲಿಗಾರ ಎನ್.ಶಿವಣ್ಣ ಅಮಾನತುಗೊಳಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ ಆದೇಶಿಸಿದ್ದಾರೆ. ಎನ್.ಶಿವಣ್ಣ ಅವರು ಲಂಚ ಸ್ವೀಕರಿಸುತ್ತಿರುವ ದೃಶ್ಯದ ವಿಡಿಯೋವನ್ನು ಆಯುಕ್ತರ ವಾಟ್ಸ್ ಆಯಪ್‌ಗೆ ಕಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು.
ಜಿಲ್ಲಾಧಿಕಾರಿ ಸಹ ಸೂಕ್ತ ಕಾನೂನು ಕ್ರಮಕ್ಕೆ ಸೂಚಿಸಿದ್ದರು. ಇದೀಗ ವಿಚಾರಣೆ ಬಾಕಿ ಇಟ್ಟು ಅಮಾನತುಗೊಳಿಸಿದ್ದಾರೆ. ಆ ವಿಡಿಯೋ ದೃಶ್ಯವನ್ನು ಅವಲೋಕಿಸಿದ್ದಾಗ 500ರ ನೋಟು ಎಣಿಸಿ ಜೇಬಿಗೆ ಇಟ್ಟುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ. ಲಂಚ ಪಡೆಯುತ್ತಿರುವುದು ಕಂಡುಬಂದಿದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಆನ್‌ಲೈನ್ ತಂತ್ರಾಂಶದ ಮೂಲಕ ಸೃಷ್ಟಿಸಿರುವ ಚಲನ್ ಪಡೆದು ಬ್ಯಾಂಕ್ ಮೂಲಕ ಖಾತಾ ವರ್ಗಾವಣೆ ಶೂಲ್ಕ ಪಾವತಿಸುವುದು ಸರಿಯಾದ ನಿಯಮ. ಆದರೆ ನೀವು, ಸಾರ್ವಜನಿಕರಿಂದ ನೇರವಾಗಿ ಹಣ ಪಡೆದು ಖಾತಾ ವರ್ಗಾವಣೆ ಶುಲ್ಕ ಪಾವತಿಸುತ್ತೇನೆಂದು ಹೇಳುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.



