ದಾವಣಗೆರೆ: 13 ಸಾವಿರ ಲಂಚ ಪಡೆಯುವಾಗ ಸಬ್ ರಿಜಿಸ್ಟ್ರಾರ್ ಸಿಬ್ಬಂದಿಯೊಬ್ಬ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಕ್ಕೆ ಸಿಕ್ಕಿ ಬಿದಿದ್ದಾರೆ. ಹರಿಹರ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯ ದಸ್ತು ಬರಹಗಾರ ಎಂ.ಬಿ. ಪರಮೇಶ್ವರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದವರು.
ಹರಿಹರದ ನಿವಾಸಿಯಾದ ಮಂಜುನಾಥ್ ಎಂಬುವರು ಮನೆ ಖರೀದಿ ನೋಂದಣಿ ಪತ್ರ ಪಡೆಯಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದು, ದಸ್ತು ಬರಹಗಾರ ಪರಮೇಶ್ವರ್ರನ್ನು ಸಂಪರ್ಕಿಸಿದ್ದರು. ಆದರೆ ಪರಮೇಶ್ವರ್ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮಂಜುನಾಥ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಶನಿವಾರ ರಾತ್ರಿ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ, ಪರಮೇಶ್ವರ್ ಅವರು ಮಂಜುನಾಥ್ರಿಂದ 13 ಸಾವಿರ ರೂಪಾಯಿ ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್ . ಕೌಲಾಪುರೆ, ಇನ್ಸ್ಪೆಕ್ಟರ್ ರಾಷ್ಟ್ರಪತಿ ಎಚ್.ಎಸ್. ಆಂಜನೇಯ ನೇತೃತ್ವದಲ್ಲಿ ದಾಳಿ ನಡೆದಿತ್ತು. ಆರೋಪಿ ಎಂ.ಬಿ.ಪರಮೇಶ್ವರ್ನಿಂದ 40 ಸಾವಿರ ರೂಪಾಯಿ ನಗದು ಮತ್ತು ವಿವಿಧ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.