ದಾವಣಗೆರೆ: ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪ ಹಿನ್ನೆಲೆ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ.ಜಿ.ಎಸ್. ನಾಗರಾಜು ಮನೆ ಮೇಲೆ ಇಂದು (ಮಾ.06) ಲೋಕಾಯುಕ್ತ ಪೊಲೀಸ್ ದಾಳಿ ಮಾಡಿದೆ. ದಾಳಿ ವೇಳೆ ಘೋಷಿತ ಆದಾಯಕ್ಕಿಂತ ಶೇ.150ರಷ್ಟು ಹೆಚ್ಚು ಆಸ್ತಿ ಪತ್ತೆಯಾಗಿದೆ. ಬರೋಬ್ಬರಿ 1 ಕೆ.ಜಿ 597 ಗ್ರಾಂ ಚಿನ್ನಾಭರಣವನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ನಿವಾಸಿಗಳಿಗೆ ಶಾಕ್; ಆಸ್ತಿ ತೆರಿಗೆ ಶೇ.3 ರಷ್ಟು ಹೆಚ್ಚಳ
ನಾಗರಾಜ್ ಗೆ ಸೇರಿದ ಎಸ್.ನಿಜಲಿಂಗಪ್ಪ ಬಡಾವಣೆಯ ಮನೆ, ಕಚೇರಿ, ತಂದೆ ಮನೆ, ಫಾರಂಹೌಸ್ ಹಾಗೂ ಕುಟುಂಬದ ಸಹಕಾರ ಸಂಘದ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು.
5 ಕೆ.ಜಿ. 240 ಗ್ರಾಂ ಬೆಳ್ಳಿ ವಸ್ತುಗಳು, 38 ಎಕರೆ ಕೃಷಿ ಭೂಮಿ, 4 ಮನೆ ಹಾಗೂ 1 ನಿವೇಶನ, ಅಂದಾಜು ₹ 32 ಲಕ್ಷ ಮೌಲ್ಯದ ಪೀಠೋಪಕರಣ ಹಾಗೂ ₹ 38 ಲಕ್ಷ ಮೌಲ್ಯದ ವಾಹನಗಳು ಪತ್ತೆಯಾಗಿವೆ’ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪುರೆ ತಿಳಿಸಿದ್ದಾರೆ.
ಲೋಕಾಯುಕ್ತ ದಾಳಿ ವೇಳೆ ಕಚೇರಿಯ ಎರಡು ರೆಫ್ರಿಜಿರೇಟರ್‌ನಲ್ಲಿ ಆಹಾರದ ಮಾದರಿಗಳು ಕೊಳೆತ ಸ್ಥಿತಿಯಲ್ಲಿ ಸಿಕ್ಕಿವೆ. ಹೋಟೆಲ್, ಕಲ್ಯಾಣ ಮಂಪಟ, ವಿವಿಧ ಅಂಗಡಿ ಸೇರಿ ಹಲವೆಡೆ ಸಂಗ್ರಹಿಸಿದ್ದ ಇಡ್ಲಿ, ವಡೆ, ಸಾಂಬಾರು, ದೋಸೆ, ಉಪ್ಪಿನಕಾಯಿ ಸೇರಿ ಹಲವು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸದೇ ಇಟ್ಟುಕೊಳ್ಳಲಾಗಿತ್ತು.
ನಿಯಮಗಳನ್ನು ಪಾಲಿಸದೇ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವುದು ಹಾಗೂ ಕಚೇರಿಯ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದು ಪತ್ತೆಯಾಗಿದೆ. ಈ ಬಗ್ಗೆ ವರದಿ ತಯಾರಿಸಲಾಗುತ್ತಿದೆ ಎಂದು ಲೋಕಾಯುಕ್ತ ಎಸ್ಪಿ ಕೌಲಾಪುರೆ ಮಾಹಿತಿ ನೀಡಿದ್ದಾರೆ.